ಎರಡು ಕೈಯಲ್ಲಿ ಬರೆದು ದಾಖಲೆ ಬರೆದ ಮಂಗಳೂರಿನ ಬಾಲಕಿ
ಕೇವಲ 1 ನಿಮಿಷದಲ್ಲಿ ತನ್ನ ಎರಡು ಕೈಗಳಿಂದ 40 ಶಬ್ದಗಳನ್ನು ಬರೆದು ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ ಮಂಗಳೂರಿನ ಆದಿ ಸ್ವರೂಪ.
ಒಬ್ಬ ಮನುಷ್ಯ ಒಂದು ನಿಮಿಷದಲ್ಲಿ ಸಾಮಾನ್ಯವಾಗಿ 20 ಶಬ್ದಗಳನ್ನು ಬರೆಯುತ್ತಾನೆ. ಆದರೆ ಇಲ್ಲೊಬ್ಬ ಹುಡುಗಿ ಒಂದು ನಿಮಿಷಕ್ಕೆ ತನ್ನ ಎರಡು ಕೈಗಳಿಂದ 50 ಶಬ್ದ ಬರೆಯಬಲ್ಲಳು. ಅಷ್ಟೇ ಅಲ್ಲ, ಒಂದು ಕೈಯಿಂದ ಕನ್ನಡ ಇನ್ನೊಂದು ಕೈಯಿಂದ ಇಂಗ್ಲೀಷ್, ಏಕ ದಿಕ್ಕಿನಲ್ಲಿ, ವಿರುದ್ಧ ದಿಕ್ಕಿನಲ್ಲಿ, ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲೆ ಹೀಗೆ ನಾನಾ ಪ್ರಕಾರಗಳಲ್ಲಿ ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾಳೆ ಮಂಗಳೂರಿನ ಆದಿ ಸ್ವರೂಪ.

ವಿರುದ್ಧ ದಿಕ್ಕಿನಲ್ಲಿ ಬರೆಯುತ್ತಿರುವ ಆದಿ ಸ್ವರೂಪ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿವಳಾದ 15 ವರ್ಷದ ಬಾಲಕಿ ಆದಿ ಸ್ವರೂಪ ಕೇವಲ 1 ನಿಮಿಷದಲ್ಲಿ ತನ್ನ ಎರಡು ಕೈಗಳಿಂದ 40 ಶಬ್ದಗಳನ್ನು ಬರೆದು ದಾಖಲೆ ನಿರ್ಮಿಸಿದ್ದಾಳೆ. ಯೂನಿಡೈರೆಕ್ಷನಲ್ ಅಂದರೆ ಒಂದು ದಿಕ್ಕಿನಲ್ಲಿ ಬರೆದು ಉತ್ತರ ಪ್ರದೇಶದ ಲಾಟಾ ಫೌಂಡೇಶನ್ನ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಮುಂದೆ ಗಿನ್ನೆಸ್ ವಿಶ್ವ ದಾಖಲೆ ಮಾಡಬೇಕೆಂಬ ಬಯಕೆ ಹೊಂದಿರುವ ಆದಿ ನಿರಂತರ ಅಭ್ಯಾಸದಿಂದ ಈಗ ನಿಮಿಷಕ್ಕೆ 50 ಶಬ್ದಗಳನ್ನು ಬರೆಯಬಲ್ಲಳು.
ಕಳೆದ ಎರಡು ವರ್ಷಗಳಿಂದ ಈ ರೀತಿಯ ಬರವಣಿಗೆಯನ್ನು ಅಭ್ಯಾಸ ಮಾಡುತ್ತಿರುವ ಆದಿ, ಒಟ್ಟು 10 ವಿಭಿನ್ನ ರೀತಿಯಲ್ಲಿ ಒಂದೇ ಸಮಯದಲ್ಲಿ ಎರಡು ಕೈ ಉಪಯೋಗಿಸಿಕೊಂಡು ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾಳೆ. 10 ಪ್ರಕಾರಗಳು ಹೀಗಿವೆ: ಯುನಿ ಡೈರೆಕ್ಷನ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರೈಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೊ ಟಾಪಿಕ್, ಹೆಟೆರೊ ಲಿಂಗ್ವಿಸ್ಟಿಕ್, ಎಕ್ಸ್ಚೇಂಜ್, ಡ್ಯಾನ್ಸಿಂಗ್, ಮತ್ತು ಬ್ಲೈಂಡ್ ಫೋಲ್ಡಿಂಗ್.

“ಏನಾದರೂ ಒಂದು ಕೆಲಸ ಪ್ರಾರಂಭಿಸಿಬೇಕಾದರೆ ಆಗದು ಎಂದು ಹೇಳಿ ಸುಮ್ಮನೆ ಕೂರದೆ ಒಮ್ಮೆ ಪ್ರಯತ್ನಿಸಿ ನೋಡಿ, ನಿಲ್ಲಿಸಬೇಡಿ,” ಎನ್ನುತ್ತಾಳೆ ಆದಿ.
ಔಪಚಾರಿಕ ಶಿಕ್ಷಣವನ್ನು ಪಡೆಯದ ಆದಿ, ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಅಭ್ಯಾಸ ಮಾಡಿದ್ದಾಳೆ. ಸ್ವರೂಪದಲ್ಲಿ ವಿಶೇಷ ಶಿಕ್ಷಣ ಪದ್ಧತಿ ಜಾರಿಯಿದ್ದು, ಅಲ್ಲಿ ಬಲವಂತವಾದ ಕಲಿಕೆಗೆ ಅವಕಾಶಕೊಡದೆ ಸ್ವಯಂ ಅಧ್ಯಯನವನ್ನೂ ಬೆಂಬಲಿಸಲಾಗುತ್ತದೆ.
“ಆದಿ ಒಂದೂವರೆ ವರ್ಷದವಳಿದ್ದಾಗಲೆ ಓದುತ್ತಿದ್ದಳು, ಎರಡೂವರೆ ವರ್ಷಕ್ಕೆ ದಿನಕ್ಕೆ 30 ಪುಟ ಬರೆಯುತ್ತಿದ್ದಳು,” ಎನ್ನುತ್ತಾರೆ ಅವರ ತಂದೆ ಮತ್ತು ಸ್ವರೂಪ ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಗೋಪಾಡ್ಕರ್.

ಯಕ್ಷಗಾನ ವೇಷದಲ್ಲಿ ಆದಿ ಸ್ವರೂಪ
ಎರಡು ಕೈಯಲ್ಲಿ ಬರೆಯುವುದು ಸೇರಿದಂತೆ ಆದಿ ಇನ್ನು ಅನೇಕ ಪ್ರತಿಭೆಗಳನ್ನು ಕರಗತ ಮಾಡಿಕೊಂಡಿದ್ದಾಳೆ. ರೂಬಿಕ್ಸ್ ಕ್ಯೂಬ್ ಬಿಡಿಸುವುದು, ಮಿಮಿಕ್ರಿ, ಬೀಟ್ ಬಾಕ್ಸ್, ಸಂಗೀತ, ಯಕ್ಷಗಾನ ಹೀಗೆ ಹಲವಾರು ಕಲೆಗಳು ಅವಳಲ್ಲಿ ಅರಳುತ್ತಿವೆ. ಯಕ್ಷಗಾನದ 50 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆದಿ ನೀಡಿದ್ದಾಳೆ. ಇಷ್ಟೇ ಅಲ್ಲದೆ 1000 ವಸ್ತುಗಳ ಹೆಸರನ್ನು ಅಥವಾ 1000 ಮೊಬೈಲ್ ನಂಬರ್ಗಳನ್ನು ಕೊಟ್ಟರೆ ಅಷ್ಟನ್ನು ನೆನಪಿಟ್ಟುಕೊಂಡು ಹೇಳುವ ಸ್ಮರಣ ಶಕ್ತಿಯೂ ಅವಳಿಗಿದೆ. ಮನೋವಿಜ್ಞಾನ ವಿಷಯದ ಬಗ್ಗೆಯೂ ಆದಿ ಆಸಕ್ತಿ ಹೊಂದಿದ್ದಾಳೆ.
ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಆದಿ ಪುಸ್ತಕ ಓದುವುದನ್ನು ಇಷ್ಟ ಪಡುತ್ತಾಳೆ. ತನ್ನ ಹತ್ತನೇ ವಯಸ್ಸಿನಲ್ಲೆ “ಆದಿಯ ಕತೆ ಅಂತ್ಯ ನೀವೇ ಹೇಳಿ” ಎಂಬ ಕತೆ ಪುಸ್ತಕವನ್ನು ಬರೆದಿದ್ದಾಳೆ ಈಕೆ. ಆ ಕತೆಗಳಿಗೆ ಚಿತ್ರವನ್ನು ಆದಿಯೇ ಬಿಡಿಸಿದ್ದಾಳೆ. ಪ್ರಸ್ತುತ ಒಂದು ಕಾದಂಬರಿಯನ್ನು ಆದಿ ಬರೆಯುತ್ತಿದ್ದಾಳೆ.
ಮುಂದಿನ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ಆದಿ ಇಂಗ್ಲೀಷ್ ಪರೀಕ್ಷೆಯನ್ನು ಎರಡು ಕೈಯಲ್ಲಿ ಬರೆಯಬೇಕೆಂದು ಯೋಚಿಸಿದ್ದಾಳೆ.