ಕಡಲತೀರದಲ್ಲಿ ಅಡಗಿದೆ ವಾಟರ್ ರೆಸಾರ್ಟ್-ಮೂನ್ಹೋಲ್
ವಿಶ್ವಾಸ್ ಭಾರಾಧ್ವಾಜ್

ಮೂನ್ಹೋಲ್ ವಾಟರ್ ರೆಸಾರ್ಟ್, ಟರ್ಕ್ವಾಯಿಸ್ ಕೆರಿಬಿಯನ್ ದ್ವೀಪದಲ್ಲಿರುವ ಐದು ನೈಸರ್ಗಿಕ ಕಲ್ಲುಗಳಿಂದ ನಿರ್ಮಿಸಲಾಗಿರುವ ಸುಸಜ್ಜಿತ ಹಾಲಿಡೇ ವಿಲ್ಲಾಗಳು. ಇಲ್ಲಿ ವೆರಿ ಸ್ಪೆಷಲ್ ಹಾಗೂ ನ್ಯಾಚುರಲ್ ಮರೈನ್ ಎನ್ವಿರಾನ್ಮೆಂಟ್ ವಿಲ್ಲಾಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲಾಗುತ್ತದೆ. ಇಲ್ಲಿನ ವಿಶಾಲ ಸಾಗರದ ಅಲೆಗಳ ನಡುವೆ ಮೌನ ಹಾಗೂ ಪ್ರಶಾಂತ ಪರಿಸರದ ನೆಮ್ಮದಿಯನ್ನು ಅರಸುತ್ತಾ ಇಲ್ಲಿಗೆ ದೇಶ ವಿದೇಶಗಳ ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. 1960ರಲ್ಲಿ ಮೂಲತಃ ಸಾಹಸ ಪ್ರವೃತ್ತಿಯ ದಂಪತಿಗಳಾದ ಟಾಮ್ ಹಾಗೂ ಗ್ಲಡ್ಡಿ ಜಾನ್ಸ್ಟನ್ ನಿರ್ಮಿಸಿದ ಸ್ಟೋನ್ ಹೌಸ್ ಇದು. ಇಲ್ಲಿದ್ದ ಒಟ್ಟು 17 ಸ್ಟೋನ್ ಹೌಸ್ಗಳಲ್ಲಿ ಈಗ ಕೇವಲ 5 ಸ್ಟೋನ್ಹೌಸ್ ವಿಲ್ಲಾಗಳನ್ನು ಪ್ರವಾಸಿಗಳಿಗೆ ಒದಗಿಸಿಕೊಡಲಾಗುತ್ತಿದೆ. ಇಲ್ಲಿ 12 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಪ್ರವಾಸಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಸೇವೆ ಒದಗಿಸಲಾಗುತ್ತಿದೆ.

ಪ್ರವಾಸಿಗಳನ್ನು ಕೈಬೀಸಿ ಕರೆವ ಸಾಗರತಾಣ
ಮೂನ್ಹೋಲ್ ರೆಸಾರ್ಟ್ ಇರುವುದು ಬೇಕ್ವಿಯಾದ ಗ್ರೆನಡೈನ್ ದ್ವೀಪಗಳಲ್ಲಿ. ಇಲ್ಲಿನ 5 ಸುಸಜ್ಜಿತ ವಿಲ್ಲಾಗಳು ಪ್ರವಾಸಿಗಳಿಗೆ ವಿಶೇಷ ಅನುಭವ ನೀಡುತ್ತವೆ. ನೀಲ ಸಮುದ್ರದ ವಿಹಂಗಮ ನೋಟ ಒದಗಿಸಿಕೊಡುತ್ತದೆ. ಇಲ್ಲಿನ ವಿಲ್ಲಾಗಳನ್ನು ವ್ಹೇಲ್ ತಿಮಿಂಗಿಲದ ಮೂಳೆಗಳಿಂದ ಹಾಗೂ ಡ್ರಫ್ಟ್ ಮರದ ದಿಮ್ಮಿಗಳಿಂದ ಕಟ್ಟಲಾಗಿದೆ. ಈ ಮೂಲಕ ಸ್ವಾಭಾವಿಕವಾಗಿ ಸಮುದ್ರ ಪರಿಸರದಲ್ಲಿ ನಿರ್ಮಿತವಾದ ವಾಟರ್ ರೆಸಾರ್ಟ್ ಅನ್ನುವ ಶ್ರೇಯಕ್ಕೂ ಇದು ಪಾತ್ರವಾಗಿದೆ.

ಬೇಕ್ವಿಯಾ ಕಡಲತೀರದಲ್ಲಿ ಪ್ರವಾಸಿಗಳಿಗೆ ಸ್ಕೂಬಾ ಡೈವಿಂಗ್, ಬೋಟಿಂಗ್, ಫೀಶಿಂಗ್ನಂತಹ ಸೌಕರ್ಯಗಳನ್ನು ವಾಟರ್ ರೆಸಾರ್ಟ್ ಆಯೋಜಕರು ಒದಗಿಸಿಕೊಡುತ್ತಾರೆ. ರಾತ್ರಿಗಳಲ್ಲಿ ಝಗಮಗಿಸುವ ಬಲ್ಬ್ಗಳಿಂದ ಇಡೀ ಸ್ಟೋನ್ ಹೌಸ್ ಸಮೂಹವನ್ನು ಅಲಂಕರಿಸಿ ವಿಶೇಷ ಮೆರುಗು ನೀಡಲಾಗುತ್ತದೆ. ಪ್ರವಾಸಿಗಳಿಗೆ ಇಲ್ಲಿನ ರಂಗೀನ್ ರಾತ್ರಿಗಳ ಡಿನ್ನರ್ ಹೊಂದುವುದೇ ಸ್ಪೆಷಲ್ ಅನುಭವ ಅನ್ನುವುದು ಇಲ್ಲಿನ ನಿರ್ವಾಹಕರ ಅಭಿಪ್ರಾಯ.

ಮಳೆಯ ನೀರನ್ನು ಸಂಗ್ರಹಿಸಿ ಇಲ್ಲಿ ಕುಡಿಯಲು ಹಾಗೂ ಅಡುಗೆ, ಖಾದ್ಯ ತಯಾರಿಕೆಗೆ ಬಳಸಿಕೊಳ್ಳಲಾಗುತ್ತದೆ. ಈ ರೆಸಾರ್ಟ್ನ ಬಾಣಸಿಗರಿಗೆ ಹಿಡಿದಿಟ್ಟುಕೊಂಡ ಮಳೆಯ ನೀರು ಅತ್ಯಗತ್ಯ ಹಾಗೂ ಅನಿವಾರ್ಯವಾದಾಗ ಮಾತ್ರ ಕೆರಿಬಿಯನ್ ತೀರದಿಂದ ನೀರನ್ನು ತರಿಸಿಕೊಳ್ಳಲಾಗುತ್ತದೆ. ಸಮುದ್ರದ ನೀರನ್ನು ಪ್ಯೂರಿಫೈ ಮಾಡಿ ಇತರೆ ಬಳಕೆಗೆ ಉಪಯೋಗಿಸಲಾಗುತ್ತದೆ. ಇನ್ನುಳಿದಂತೆ ಸೋಲಾರ್ ಹಾಗೂ ಪವನ ಶಕ್ತಿಯ ಎನರ್ಜಿಯನ್ನು ಬಳಸಿಕೊಂಡು ವಾಟರ್ ರೆಸಾರ್ಟ್ ಅಭಿವೃದ್ಧಿಪಡಿಸಲಾಗಿದೆ. ಮೂನ್ಹೋಲ್ ರೆಸಾರ್ಟ್ನಲ್ಲಿ ಒಬ್ಬ ಹೌಸ್ಕೀಪರ್ ಹಾಗೂ ಒಬ್ಬ ಬಾಣಸಿಗ, ಪರಿಚಾರಕರು ಸೇರಿದಂತೆ ಒಟ್ಟು 12 ಜನಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇಕ್ವಿಯಾ ಕೆರಿಬಿಯನ್ ತೀರದ ಹಳ್ಳಿಯಿಂದ ಇಲ್ಲಿಗೆ ಬೇಕಾದ ವಸ್ತುಗಳನ್ನು ಹಾಗೂ ಆಹಾರ ಸಾಮಗ್ರಿಗಳನ್ನು ತರಲಾಗುತ್ತದೆ.
ವಾಟರ್ ರೆಸಾರ್ಟ್ ಹಿಂದಿದೆ ಸಾಹಸಮಯ ಕಥಾನಕ
ಮೂನ್ಹೋಲ್ ವಾಟರ್ ರೆಸಾರ್ಟ್ ಸೃಷ್ಟಿಯ ಹಿಂದೆ ಸಾಹಸಮಯ ಕಥೆ ಇದೆ. ಈ ವಾಟರ್ ರೆಸಾರ್ಟ್ನ ನಿರ್ಮಾತೃಗಳಾದ ಟಾಮ್ ಹಾಗೂ ಗ್ಲಡ್ಡಿ ಜಾನ್ಸ್ಟನ್ 1950ರ ಸುಮಾರಿಗೆ ಈ ಬೇಕ್ವಿಯಾ ಕೆರಿಬಿಯನ್ ಕಡಲ ತೀರದಲ್ಲಿ ಬೋಟಿಂಗ್ನಲ್ಲಿ ತೆರಳುತ್ತಿದ್ದಾಗ ಈ ಸ್ಥಳ ನೋಡಿ ಆಕರ್ಷಿತರಾಗಿದ್ದರು. ಕೇವಲ ಬೋಟ್ನಲ್ಲಿ ಮಾತ್ರ ತೆರಳಬಹುದಾದ ಇಲ್ಲಿ ವಾಟರ್ ರೆಸಾರ್ಟ್ ಮಾಡುವ ದುಸ್ತರವಾದ ಹಾಗೂ ಅಷ್ಟೇ ಸುಂದರವಾದ ಆಲೋಚನೆ ಈ ದಂಪತಿಗಳಿಗೆ ಬಂದಿತ್ತು.
ಸ್ವಾಭಾವಿಕವಾಗಿ ಇಲ್ಲಿ ಆಳವಾಗಿ ಬೇರುಬಿಟ್ಟು, ಸಮುದ್ರದ ಅಲೆಗಳ ಹೊಡೆತಕ್ಕೆ ಬಂಡತನದಿಂದ ತಡೆಯೊಡ್ಡಿರುವ 30 ಎಕರೆ ಕಲ್ಲುಕೊರಲಿನ ಮಧ್ಯೆ ರಾಕ್ ಗಾರ್ಡನ್ ನಿರ್ಮಿಸುವ ಉದ್ದೇಶದೊಂದಿಗೆ 1960ರಲ್ಲಿ ಶುರುವಾದ ಯೋಜನೆಯೇ ಮೂನ್ ಹೋಲ್ ವಾಟರ್ ರೆಸಾರ್ಟ್. ಇಲ್ಲಿನ ಸಹಜ ಶಿಲೆಗಳನ್ನೇ ಬಳಸಿಕೊಂಡಿ ಸ್ವಾಭಾವಿಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ರೆಸಾರ್ಟ್ ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಮೊದಲು 17 ವಿಲ್ಲಾಗಳನ್ನು ನಿರ್ಮಿಸಲಾಗಿತ್ತು. ಆದರೆ ಸದ್ಯ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಮಾತ್ರ 5 ವಿಲ್ಲಾಗಳು.

ಕಾನೂನಾತ್ಮಕ ಸ್ವರೂಪ ಪಡೆದ ಕಾನೂನು ಹೋರಾಟ
2001ರಲ್ಲಿ ಟಾಮ್ ನಿಧನ ಹೊಂದಿದ ನಂತರ ಈ ವಾಟರ್ ರೆಸಾರ್ಟ್ ಮಾಲಿಕತ್ವ ಸಾಧಿಸಿ ಸ್ವಾಧೀನ ಪಡಿಸಿಕೊಳ್ಳಲು ಕೆಲವರು ಕಾನೂನು ಹೋರಾಟಕ್ಕೆ ಮುಂದಾದರು. ಸುಮಾರು 2 ಲಕ್ಷ ಪೌಂಡ್ನಿಂದ 7 ಲಕ್ಷದ 95 ಸಾವಿರದ 439 ಪೌಂಡ್ ವರೆಗೆ ಇಲ್ಲಿನ 11 ವಿಲ್ಲಾಗಳನ್ನು ಮಾರಾಟ ಮಾಡಲಾಯಿತು. ಆದರೆ ಇಲ್ಲಿನ 5 ವಿಲ್ಲಾಗಳನ್ನು ಮಾತ್ರ ಮೂನ್ಹೋಲ್ ಟ್ರಸ್ಟ್ ಇನ್ನೂ ನಡೆಸಿಕೊಂಡು ಬರುತ್ತಿದೆ.
ಹಚ್ಚ ಹಸರಿನ ಮರಗಳ ನಡುವೆ ಅಡಗಿರುವ ಈ ಮೂನ್ಹೋಲ್ ವಾಟರ್ ರೆಸಾರ್ಟ್ ತನ್ನ ಮುಂದೆ ವಿಶಾಲ, ಸುನೀತ ಮಹಾಸಾಗರ ರಾಶಿಯನ್ನು ಹೊಂದಿದೆ. ಇಲ್ಲಿನ ವಿಲ್ಲಾಗಳಲ್ಲಿ ಸುಸಜ್ಜಿತ ಬೆಟ್ ರೂಂ, ಸಮುದ್ರ ವೀಕ್ಷಿಸಲು ವಿಹಂಗಮ ತೆರೆದ ಕಿಟಕಿಗಳು, ಶಿಲಾ ಚಾವಣಿ, ಅತ್ಯದ್ಭುತ ವಿನ್ಯಾಸದ ಸ್ವಾಭಾವಿಕ ಶಿಲೆಯ ಪೀಠೋಪಕರಣಗಳು ಪ್ರವಾಸಿಗಳನ್ನು ಇನ್ನಿಲ್ಲದಂತೆ ಆಕರ್ಷಿಸುತ್ತದೆ. ಮುಖ್ಯವಾಗಿ ಇಲ್ಲಿ ಸಮುದ್ರ ಪರಿಸರವನ್ನು ಸಹಜವಾಗಿ ತೆರೆದಿಟ್ಟಿರುವುದು ಹಾಗೂ ಇಲ್ಲಿನ ಪ್ರಶಾಂತ ವಾತಾವರಣ ಟೂರಿಸಂ ಉದ್ಯಮವನ್ನು ಉತ್ತೇಜಿಸುತ್ತಿದೆ.