ಜಲಸಂರಕ್ಷಣೆಗೆ ಕಾಲ್ನಡಿಗೆ-ಛಲಗಾರ ಅರ್ಜುನ್ ಭೋಗಾಲ್
ವಿಶಾಂತ್

ಇದನ್ನು ಹುಚ್ಚು ಅಂತೀರೋ ಅಥವಾ ಪರಾಕಾಷ್ಠೆ ಅಂತೀರೋ ಗೊತ್ತಿಲ್ಲ. ಆದ್ರೆ ಅರ್ಜುನ್ ಭೋಗಾಲ್ ಅವರ ಸ್ಟೋರಿ ನೋಡಿದ್ರೆ ನಿಮಗೆ ಆಶ್ಚರ್ಯವಾಗದೇ ಇರದು. ಹೌದು, ಸಾಮಾನ್ಯವಾಗಿ ಸಮಾಜ ಮುಖೀ ಕೆಲಸ ಮಾಡಬೇಕು ಅನ್ನೋರು ಸ್ವಲ್ಪ ಹಣ ದಾನ ಮಾಡಿ ಸುಮ್ಮನಾಗಿಬಿಡ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದಿಬ್ಬರಿಗೆ ತಾವೇ ಖುದ್ದು ನಿಂತು ಸಹಾಯ ಹಸ್ತ ಚಾಚುತ್ತಾರೆ. ಆದ್ರೆ ಅರ್ಜುನ್ ಭೋಗಾಲ್ ಜಲಸಂರಕ್ಷಣೆಗಾಗಿ ಕಾಲ್ನಡಿಗೆಯಲ್ಲೇ ವಿಶ್ವಪರ್ಯಟನೆ ಮಾಡುತ್ತಿದ್ದಾರೆ. 10 ಸಾವಿರ ಮೈಲಿಯಷ್ಟು ದೂರ ನಡೆಯಲಿರುವ ಅರ್ಜುನ್, ಈ ಕಾಲ್ನಡಿಗೆಯಲ್ಲೇ 15 ದೇಶಗಳನ್ನು ಭೇಟಿ ಮಾಡಲಿದ್ದಾರೆ. ಈ ಮೂಲಕ ಜಲಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎರಡು ಸ್ವಯಂಸೇವಾ ಸಂಘಗಳಿಗೆ ನಿಧಿ ಸಂಗ್ರಹ ಹಾಗೂ ಸ್ವಚ್ಛ ಕುಡಿಯುವ ನೀರು ಹಾಗೂ ಜಲಸಂರಕ್ಷಣೆಯು ಕುರಿತು ತಮ್ಮದೇ ರೀತಿಯಲ್ಲಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಕಾಲ್ನಡಿಗೆ ಈಗಲೂ ಮುಂದುವರಿದಿದೆ.

ಹೇಗೆ ಶುರುವಾಯ್ತು ಈ ಕಾಲ್ನಡಿಗೆ..?
ಅರ್ಜುನ್ ಭೋಗಾಲ್, ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಹಾಗೂ ವೀಡಿಯೋ ಚಿತ್ರೀಕರಣ ಕಲಿತಿದ್ದಾರೆ. ಇದೇ ಸಂದರ್ಭದಲ್ಲಿ ಆ ವಿಶ್ವವಿದ್ಯಾಲಯದಲ್ಲಿ ಗ್ರಾಫಿಕ್ ಡಿಸೈನ್ ಕಲಿತ ಕೆರಿಬಿಯನ್ ರೇ ಅವರ ಪರಿಚಯವಾಯ್ತು. ಇಬ್ಬರೂ ಪರಿಸರ ಪ್ರೇಮಿಗಳು, ಜಲ ಸಂರಕ್ಷಣೆ ಕುರಿತು ಏನಾದ್ರೂ ಮಾಡಬೇಕು ಅಂತ ಗುರಿಯಿದ್ದವರು. ಹೀಗಾಗಿಯೇ ಇಬ್ಬರೂ ಸೇರಿ ಚರ್ಚಿಸಿ ಒಂದು ಚಿಕ್ಕ ಹೆಜ್ಜೆ ಇಟ್ಟೇ ಬಿಟ್ಟರು. ಅದೀಗ ಲಕ್ಷ ಕೋಟಿ ಹೆಜ್ಜೆಗಳಾಗಿರುವ ಬಾರ್ಡರ್ ವಾಕ್, ಜಲಸಂರಕ್ಷಣೆಗೆ ವಿಶ್ವಪರ್ಯಟನೆ. ಈ ಮೂಲಕ ವಾಟರ್ ಏಡ್ ಹಾಗೂ ಮೆರೀನ್ ಸಂರಕ್ಷಣಾ ಸೊಸೈಟಿಗೆ ಎಂಬ ಎರಡು ಎನ್ಜಿಓಗಳಿಗೆ 25 ಸಾವಿರ ಪೌಂಡ್ನಷ್ಟು ನಿಧಿ ಸಂಗ್ರಹಿಸುವುದು, ದಾರಿಯುದ್ದಕ್ಕೂ ಸಾಧ್ಯವಾದಷ್ಟು ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡಿ ಜಲಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಒಂದು ಡಾಕ್ಯುಮೆಂಟರಿ ಸಿದ್ಧಪಡಿಸುವುದೂ ಅವರ ಉದ್ದೇಶ.

ಬ್ರಿಟನ್ನ ಕಾರ್ಡಿಫ್ನಿಂದ ಹೊರಟ ಈ ಜೋಡಿ ಆಸ್ಟ್ರೇಲಿಯಾದ ಹೊಬಾರ್ಟ್ ವರೆಗೂ ನಡೆಯುವ ನೀಲನಕ್ಷೆ ಸಿದ್ಧಪಡಿಸಿದ್ರು. ಅದರಂತೆ 2012ರ ಏಪ್ರಿಲ್ 1ರಂದು ಹೊರಟೇ ಬಿಟ್ಟರು. ಹಿಮದಲ್ಲಿ, ದಟ್ಟ ಕಾಡು, ಮರಳುಗಾಡು, ಜನನಿಬಿಡ ಪ್ರದೇಶಗಳಿಂದ ಜನಜೀವನವಿಲ್ಲದ ಬೆಂಗಾಡು... ಹೀಗೆ ಎಲ್ಲ ರೀತಿಯ ಜಾಗಗಳಲ್ಲೂ ನಡೆದೇ ಸಾಗಿದರು. ಆದ್ರೆ ಸಮುದ್ರ ಅಥವಾ ನದಿ ಸಿಕ್ಕರೆ ಆಗ ಮಾತ್ರ ವಿಮಾನಯಾನ ಅಥವಾ ದೋಣಿ, ಹಡಗುಗಳಲ್ಲಿ ಪ್ರಯಾಣಿಸುವ ಮೂಲಕ ದಾಟುತ್ತಿದ್ದರು. ನಂತರ ಎಂದಿನಂತೆ ಕಾಲೇ ಅವರ ಸಾರಿಗೆ ವ್ಯವಸ್ಥೆಯಾಗಿದೆ.

ದೂರಾದ್ರು ಕೆರಿಬಿಯನ್ ರೇ..!
ಹೀಗೇ ಹಲವು ಕಷ್ಟ- ಸಮಸ್ಯೆಗಳ ನಡುವೆ ಕೆರಿಬಿಯನ್ ಹಾಗೂ ಅರ್ಜುನ್ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗಲೇ ಆಘಾತವೊಂದು ಬಂದೆರಗಿತು. ಅದೇನಂದ್ರೆ ಕಳೆದ ವರ್ಷವಷ್ಟೇ ಅರ್ಥಾತ್ 2014ರಲ್ಲಿ ಕೆರಿಬಿಯನ್ ರೇ ಈ ಕಾಲ್ನಡಿಗೆಯ ವಿಶ್ವಪರ್ಯಟನೆಯಿಂದ ದೂರವಾಗಬೇಕಾಯ್ತು. ಅವರ ಮನೆಯಲ್ಲಿ ಉಂಟಾ ಸಮಸ್ಯೆಯಿಂದ ಅವರು ತಕ್ಷಣ ಈ ಬಾರ್ಡರ್ವಾಕ್ ಅನ್ನು ಬಿಟ್ಟು ಮನೆಗೆ ವಾಪಸ್ ಹಾರಬೇಕಾಯ್ತು. ಇದು ಅರ್ಜುನ್ ಭೋಗಾಲ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಎರಡು ವರ್ಷಗಳ ಕಾಲ ಕ್ಷಣ ಕ್ಷಣಕ್ಕೂ ಜೊತೆಯಲ್ಲಿದ್ದ ಗೆಳೆಯ ಕೆರಿಬಿಯನ್ ಅರ್ಧದಲ್ಲೇ ಈ ಹೋರಾಟ ಬಿಟ್ಟಿದ್ದು ಅವರಿಗೆ ನೋವುಂಟು ಮಾಡ್ತು. ಒಬ್ಬನೇ ಮುಂದುವರಿಸುವುದು ಹೇಗೆ? ಅನ್ನೋ ಪ್ರಶ್ನೆಯೂ ಮೂಡಿತು. ನಾನೂ ಈ ಕಾಲ್ನಡಿಗೆ ನಿಲ್ಲಿಸಿಬಿಡ್ಲಾ ಅನ್ನೋ ಯೋಚನೆಯೂ ಹಲವು ಬಾರಿ ಕಾಡಿತು. ಆದ್ರೆ ಅರ್ಜುನ್ ಭೋಗಾಲ್ ಎದೆಗುಂದಲಿಲ್ಲ. ಮುಂದಿಟ್ಟ ಹೆಜ್ಜೆಯನ್ನು ಮತ್ತೆ ಹಿಂತೆಗೆಯಲಿಲ್ಲ. ಬದಲಿಗೆ ಗೆಳೆಯ ಕೆರಿಬಿಯನ್ಅನ್ನು ಆತ್ಮೀಯವಾಗಿ ಬೀಳ್ಕೊಟ್ಟು ತಾವೊಬ್ಬರೇ ಪಯಣ ಮುಂದುವರಿಸಿದ್ರು.

ಇಂಗ್ಲೆಂಡ್, ಜರ್ಮನಿ, ಪೋಲೆಂಡ್, ಉಕ್ರೇನ್, ಮಲೇಷ್ಯಾಗಳನ್ನು ಸುತ್ತಿ ಕಝಕಿಸ್ತಾನದ ಮರಳುಗಾಡು, ಭಾರತ, ನೇಪಾಳಗಳ ಹಿಮಾಲಯದ ಹಿಮಚ್ಛಾದಿತ ಬೆಟ್ಟ ಗುಡ್ಡಗಳು ಹಾಗೂ ವಿಯೆಟ್ನಾಮ್ನ ದಟ್ಟ ಕಾಡುಗಳನ್ನು ಸುತ್ತಿಕೊಂಡು ಸದ್ಯ ಆಸ್ಟ್ರೇಲಿಯಾದತ್ತ ಮುಖ ಮಾಡಿದ್ದಾರೆ ಅರ್ಜುನ್ ಭೋಗಾಲ್. ಹೀಗೆ ವಿಭಿನ್ನ ಹಾಗೂ ವಿನೂತನ ರೀತಿಯಲ್ಲಿ ಜನರಲ್ಲಿ ಜಲಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿರುವ ಅರ್ಜುನ್ ಭೋಗಾಲ್ ಅವರಿಗೆ ದಾರಿಯುದ್ದಕ್ಕೂ ಕೋಟ್ಯಂತರ ಮಂದಿ ಭೇಷ್ ಎಂದು ಬೆನ್ನು ತಟ್ಟಿದ್ದಾರೆ.

ಜರ್ಮನಿಯಲ್ಲೊಬ್ಬ ಅರ್ಜುನ್ ಅಭಿಮಾನಿ
ಹೀಗೆ ಕಾಲ್ನಡಿಗೆಯಲ್ಲಿ ಜರ್ಮನಿ ದೇಶ ಪ್ರವೇಶಿಸಿದಾಗ ಅರ್ಜುನ್ ಭೋಗಾಲ್ಗೆ ಜರ್ಮನ್ ಪ್ರಜೆ ವ್ಯಾಲಂಟೀನ್ ಪರಿಚಯವಾದ. ಆತನಿಗೆ ಅರ್ಜುನ್ ತಮ್ಮ ಯೋಜನೆ ಕುರಿತು ಹೇಳಿಕೊಂಡಾಗ ಆತ ಅರ್ಜುನ್ರ ದೊಡ್ಡ ಅಭಿಮಾನಿಯೇ ಆಗಿಬಿಟ್ಟ. ಅದೂ ಎಷ್ಟರ ಮಟ್ಟಿಗೆ ಅಂದ್ರೆ ಆದಷ್ಟು ಹೆಚ್ಚು ಸಮಯ ಇವರೊಂದಿಗೇ ಕಳೆಯತೊಡಗಿದ. ಇನ್ನು ಒಂದು ತಿಂಗಳ ಕಾಲ ನಡೆದ ಬಳಿಕ ಇನ್ನೇನು ಜರ್ಮನಿಯಿಂದ ಮತ್ತೊಂದು ದೇಶದತ್ತ ಪಯಣ ಬೆಳೆಸಬೇಕು ಅನ್ನುತ್ತಿರುವಾಗಲೇ, ವ್ಯಾಲಂಟೀನ್ ವಿಶೇಷವಾಗಿ ಅರ್ಜುನ್ರಿಗೆಂದೇ ತಂಗಲು ಒಂದು ಹೋಟೆಲ್ ರೂಮ್ಅನ್ನು ಬುಕ್ ಮಾಡಿಕೊಟ್ಟನಂತೆ. ಹೀಗೆ ಕಳೆದ ಮೂರು ವರ್ಷಗಳಿಂದ ವ್ಯಾಲೆಂಟೀನ್ ಅವರಂತೆಯೇ ದಾರಿಯುದ್ದಕ್ಕೂ ಸಾವಿರಾರು ಮಂದಿಯನ್ನು ಭೇಟಿಯಾಗೋ ಅವಕಾಶ ಸಿಕ್ಕಿದೆ ಅಂತಾರೆ ಅರ್ಜುನ್ ಭೋಗಾಲ್.

ಒಟ್ಟಾರೆ ಅರ್ಜುನ್ ಅವರು ಒಂದು ಜಲಸಂರಕ್ಷಣೆಯ ಚಕ್ರವ್ಯೂಹವನ್ನು ಭೇದಿಸಲು ಪಣತೊಟ್ಟಿದ್ದಾರೆ. ಅವರ ಪಯಣ ಮತ್ತು ಆ ಪಯಣದ ಉದ್ದೇಶ ಎರಡೂ ನೆರವೇರಲಿ ಎಂದು ನಾವೂ ಹಾರೈಸೋಣ...