ಮೌಸ್ ಹಿಡಿಯಬೇಕಾಗಿದ್ದ ಕೈಯಲ್ಲಿ ಕತ್ತರಿ ಹಿಡಿದು ಹೆಸರು ಗಳಿಸಿದ ವಿನ್ಯಾಸಕಿ
ಉಷಾ ಹರೀಶ್
ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಓದಿದವರು ಸಾಮಾನ್ಯವಾಗಿ ಮಲ್ಟಿ ನ್ಯಾಷನಲ್ ಕಂಪನಿಗಳತ್ತ ಕಣ್ಣು ಹಾಯಿಸುತ್ತಿರುತ್ತಾರೆ. ಆದರೆ ಈ ಯುವತಿ ಮಾತ್ರ ಕೈಯಲ್ಲಿ ಮೌಸ್ ಹಿಡಿಯದೇ ಕತ್ತರಿ ಸೂಚಿ ದಾರಗಳನ್ನು ಹಿಡಿದು ಬಟ್ಟೆ ಹೊಲಿಯಲು ನಿಂತಿದ್ದಾರೆ. ಡೇಟಾ ರಚನೆಯಲ್ಲಿ ತೊಡಗಿಸಿಕೊಂಡು ಅದರಲ್ಲಿ ಖುಷಿ ಕಾಣಬೇಕಿದ್ದ ಹುಡುಗಿಗೆ ಪಾರ್ಟಿವೇರ್, ಲೆಹೆಂಗಾ ವಿನ್ಯಾಸ ಮಾಡುತ್ತಾ ಹ್ಯಾಪಿಯಾಗಿರುತ್ತೇನೆ ಎನ್ನುತ್ತಾರೆ.
ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಾ ಸಾಗುತ್ತಿರುವ ಈಕೆಯ ಹೆಸರು ಸಿಂಧು ರೆಡ್ಡಿ. ಚಿಕ್ಕಂದಿನಲ್ಲೇ ವಿನ್ಯಾಸದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಈಕೆ ಅದನ್ನು ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿರುವುದಕ್ಕೆ ಬೆಂಗಳೂರಿನ ಯುವ ವಿನ್ಯಾಸಕಿಯರ ಸಾಲಿನಲ್ಲಿ ಮೊದಲಿಗಳಾಗಿದ್ದಾರೆ. ಇಂಜಿನಿಯರಿಂಗ್ ಮುಗಿದ ತಕ್ಷಣ ಸಿಂಧುಗೆ ದೊಡ್ಡ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ದೊರೆತಿತ್ತು ಆದರೆ ಅವರು ಡಿಸೈನಿಂಗ್ನಲ್ಲಿ ಭವಿಷ್ಯ ಕಂಡುಕೊಳ್ಳುವ ಉದ್ದೇಶದಿಂದ ಕೆಲಸದ ಅವಕಾಶವನ್ನು ಕೈಬಿಟ್ಟರು. ವಸ್ತ್ರವಿನ್ಯಾಸವನ್ನು ಕ್ರಮಬದ್ಧವಾಗಿ ಕಲಿಯುವ ಉದ್ದೇಶದಿಂದ ಐಐಎಫ್ಟಿಗೆ ಸೇರಿಕೊಂಡರು.

ಐಐಎಫ್ಟಿಯಲ್ಲಿ ಎಥ್ನಿಕ್ ವೇರ್ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿದ ಸಿಂಧು ಆರು ತಿಂಗಳ ನಂತರ ಹೈದಾರಬಾದ್ನ ಖ್ಯಾತ ವಸ್ತ್ರವಿನ್ಯಾಸಕಿ ಭಾರ್ಗವಿ ಕೂನಮ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದರು.
ಸಿಂಧೂ ವಿಶೇಷತೆ ಏನು..?
ಸಾಂಪ್ರದಾಯಿಕ ವಸ್ತ್ರವಿನ್ಯಾಸದಲ್ಲಿ ಹೆಚ್ಚಿನ ಕೈಚಳಕ ತೋರುವ ಸಿಂಧು, ಅವುಗಳಿಗೆ ಹೊಂದುವ ಗಾಢ ಬಣ್ಣಗಳ ಆಯ್ಕೆ, ಅವಕ್ಕೆ ಕುಸುರಿ ಕಲೆ ಇವುಗಳ ಬಗೆಗಿನ ಜ್ಞಾನ ಸಂಪಾದಿಸಿದ್ದಾರೆ. ಅದನ್ನು ಮಧುಮಗಳ ಬಟ್ಟೆಗಳನ್ನು ವಿನ್ಯಾಸ ಮಾಡುವಾಗ ಬಳಸಿ ವಧುವನ್ನು ಮತ್ತಷ್ಟು ಸುಂದರವಾಗಿ ಕಾಣುವಂತ ಮಾಡುತ್ತಾರೆ ಸಿಂಧು.
ಎಲ್ಲಾ ವಧುಗಳು ತಮ್ಮ ಮದುವೆಯಲ್ಲಿ ವಿಶೇಷವಾಗಿ ಕಾಣಬಯಸುತ್ತಾರೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಬಟ್ಟೆಗಳನ್ನು ಡಿಸೈನ್ ಮಾಡುವ ಸಿಂಧು, ಉತ್ತರ ಭಾರತೀಯ ಮದುವೆಗಳಿಗೆ ಹಾಗೂ ದಕ್ಷಿಣ ಭಾರತೀಯ ಮದುವೆಗಳ ವ್ಯತ್ಯಾಸವನ್ನು ಅರಿತುಕೊಂಡು ಮದುಮಗಳಿಗೆ ಯಾವ ಧಿರಿಸು ಕಂಫರ್ಟ್ ಎಂಬುದನ್ನು ಅರಿತು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಕಾರಣದಿಂದಲೇ ಸಿಂಧು ರೆಡ್ಡಿ ಮದುಮಗಳ ವಿನ್ಯಾಸಕ್ಕೆ ಇಷ್ಟೊಂದು ಹೆಸರು ಗಳಿಸಿರುವುದು.

ಸಿಂಧು ಅವರ ಪ್ರಕಾರ ಉತ್ತರ ಭಾರತೀಯ ವಧು ಮದುವೆಯ ದಿನ ಲೆಹೆಂಗಾ ಚೋಲಿ ಧರಿಸುತ್ತಾರೆ. ಅದಕ್ಕೆ ಕುಂದನ್ ಒಡವೆಗಳು ಅದ್ಭುತ ಕಾಂಬಿನೇಷನ್, ಆದರೆ ದಕ್ಷಿಣ ಭಾರತೀಯ ವಧುಗಳು ಇತ್ತೀಚಿನ ದಿನಗಳಲ್ಲಿ ಲೆಹೆಂಗಾ ಧರಿಸುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಶೇ 90 ರಷ್ಟು ಕಾಂಜೀವರಂ ಸೀರೆಯನ್ನು ಧರಿಸಲು ಇಷ್ಟಪಡುತ್ತಾರೆ. ಕೇರಳದಲ್ಲಿ ಚಿನ್ನದ ಬಾರ್ಡರ್ ಇರುವ ಸೀರೆಗಳನ್ನು ತೊಡುತ್ತಾರೆ. ಹೀಗೆ ಒಂದೊಂದು ಭಾಗಕ್ಕೆ ಒಂದೊಂದು ಉಡುಪು ಪ್ರಿಯವಾದ್ದರಿಂದ ನಾನು ಅದನ್ನು ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ವಸ್ತ್ರ ವಿನ್ಯಾಸ ಮಾಡುತ್ತೇನೆ ಎನ್ನುತ್ತಾರೆ ಸಿಂಧು.
ಮದುವೆಯ ದಿನ ವಧುವಿಗೆ ಯಾವ ಬಟ್ಟೆ ಹಾಕಿಕೊಂಡರೆ ಕಂಫರ್ಟ್ ಅನಿಸುತ್ತದೇ ಅದೇ ಬಟ್ಟೆಯನ್ನು ಹಾಕಿಕೊಳ್ಳಬೇಕು. ಆಗ ಆಕೆ ಇನ್ನೂ ಸುಂದರವಾಗಿ ಕಾಣುತ್ತಾಳೆ. ಮದುವೆ ಸಂಗ್ರಹ, ಪಾರ್ಟಿವೇರ್ ಮತ್ತು ಗೌನ್ಗಳ ತಯಾರಿಕೆಯಲ್ಲಿ ವಿಶೇಷ ಪರಿಣತಿಯನ್ನು ಸಿಂಧು ರೆಡ್ಡಿ ಸಾಧಿಸಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಾ ಟ್ರೆಂಡ್ಗೆ ತಕ್ಕಂತೆ ತಮ್ಮ ವಸ್ತ್ರಗಳನ್ನು ವಿನ್ಯಾಸ ಮಾಡಿ ಹಲವರ ಮನಗೆದ್ದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಿಂಧು ರೆಡ್ಡಿ ಡಿಸೈನ್ ಸ್ಟುಡಿಯೋ ಎಂಬ ಔಟ್ಲೆಟ್ ಹೊಂದಿದ್ದಾರೆ. ಆ ಮೂಲಕ ಸಾಕಷ್ಟು ಗ್ರಾಹಕರನ್ನು ಇವರು ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಹೈದರಾಬಾದ್ನಲ್ಲೂ ಒಂದು ಔಟ್ಲೆಟ್ ತೆರೆಯುವ ಯೋಚನೆಯಲ್ಲಿದ್ದಾರೆ. ಒಟ್ಟಿನಲ್ಲಿ ಇಂಜಿನಿಯರಿಂಗ್ ಓದಿದರೆ ಇಂಜಿನಿಯರ್ ಮಾತ್ರ ಆಗಬೇಕು ಎನ್ನುವ ಈ ಕಾಲದಲ್ಲಿ, ತಾನು ಓದಿದದ್ದನ್ನು ಬಿಟ್ಟು ಆಸಕ್ತಿ ಇರುವ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅದರಲ್ಲಿ ಯಶಸ್ಸನ್ನು ಸಿಂಧು ಕಂಡುಕೊಂಡಿದ್ದಾರೆ.