Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ- ಅವಮಾನ ಮಾಡಿದ ವಿದೇಶಿಗನಿಗೆ ತಕ್ಕ ಉತ್ತರ

ಟೀಮ್​ ವೈ.ಎಸ್​. ಕನ್ನಡ

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ- ಅವಮಾನ ಮಾಡಿದ ವಿದೇಶಿಗನಿಗೆ ತಕ್ಕ ಉತ್ತರ

Monday May 30, 2016 , 7 min Read

ಅವರು ಎಲೆಕ್ಟ್ರಾನಿಕ್ ಎಂಜಿನಿಯರ್ ಹಾಗೂ ವಿಜ್ಞಾನಿ. ತುಂಬಾ ಪ್ರಾಮಾಣಿಕ ಮತ್ತು ದೇಶಭಕ್ತ. ಭ್ರಷ್ಟಾಚಾರ,ಅನ್ಯಾಯ,ವಂಚನೆಯನ್ನು ಕಟುವಾಗಿ ವಿರೋಧಿಸುವ ವ್ಯಕ್ತಿ. ತೆರಿಗೆದಾರರ ಹಾಗೂ ಸಾರ್ವಜನಿಕರ ಲೂಟಿ ಹಾಗೂ ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಎರಡು ಬಾರಿ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದರು. ಮೊದಲು ಕೇಂದ್ರ ಸರ್ಕಾರದ ನೌಕರಿ ಬಿಟ್ಟ ವಿಜ್ಞಾನಿ ಎರಡನೇ ಬಾರಿ ರಾಜ್ಯ ಸರ್ಕಾರದ ನೌಕರಿ ತೊರೆದರು. ಸರ್ಕಾರಿ ಕೆಲಸ ಬಿಟ್ಟು ಉದ್ಯಮಕ್ಕೆ ಕಾಲಿಡುವ ನಿರ್ಧಾರಕ್ಕೆ ಬಂದರು. ಮುಳುಗುತ್ತಿದ್ದ ಕಂಪನಿಯನ್ನು ಕೈಗೆತ್ತಿಕೊಂಡರು. ನಷ್ಟದಲ್ಲಿದ್ದ ಕಂಪನಿಯನ್ನು ಪುನಶ್ಚೇತನಗೊಳಿಸಿದ್ರು. ನವೀನ ಉತ್ಪನ್ನಗಳನ್ನು ತಯಾರಿಸಿ ವಿಶ್ವದಾದ್ಯಂತ ಮಾರಾಟ ಮಾಡಿದ್ರು. ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದ ಅವರ ಉತ್ಪನ್ನ ಮನೆ ಮನ ತಲುಪಿತು. ಅನೇಕ ಪ್ರಶಸ್ತಿಗಳು ಅರಸಿ ಬಂದವು. ಅಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಧನಿಯೆತ್ತಿದ್ದರಿಂದ ಕಂಪನಿ ಅವರನ್ನು ಪದಚ್ಯುತಿಗೊಳಿಸಿತು.ಯಾವ ಕಂಪನಿಗಾಗಿ ಹಗಲು ರಾತ್ರಿ ಎನ್ನದೆ ದುಡಿದಿದ್ದರೋ,ಬೆವರು ಸುರಿಸಿದ್ದರೋ,ಕಂಪನಿ ಉದ್ಧಾರಕ್ಕೆ ಕನಸು ಕಂಡಿದ್ದರೋ ಅದೇ ಕಂಪನಿ ಇವರ ಜೊತೆ ಕೆಟ್ಟದಾಗಿ ನಡೆದುಕೊಂಡಿತ್ತು. ಇದು ವಿಜ್ಞಾನಿಯ ಮನಸ್ಸಿಗೆ ಘಾಸಿಯುಂಟು ಮಾಡಿತ್ತು. ಅಸಮಾಧಾನಗೊಂಡಿದ್ದ ವಿಜ್ಞಾನಿಗೆ ಏನು ಮಾಡಬೇಕು?ಏನು ಮಾಡಬಾರದು? ಎಂಬುದೇ ಗೊತ್ತಾಗಲಿಲ್ಲ. ಮನಸ್ಸು ಗೊಂದಲದಲ್ಲಿ ಬಿದ್ದಿತ್ತು. ಕೆಲವೊಮ್ಮೆ ನೌಕರಿ ಮಾಡುವ ಮನಸ್ಸಾದ್ರೆ ಮತ್ತೆ ಕೆಲವೊಮ್ಮೆ ವ್ಯಾಪಾರ ಮಾಡುವ ಬಯಕೆಯಾಗ್ತಾ ಇತ್ತು. ಈ ಗೊಂದಲದಲ್ಲಿಯೇ ವಿಜ್ಞಾನಿ ಜಿನಿವಾಗೆ ಪ್ರಯಾಣ ಬೆಳೆಸಿದ್ರು. ತಮ್ಮ ಸಂಬಂಧಿ ಜೊತೆ ವಿಶ್ವ ಆರೋಗ್ಯ ಸಂಸ್ಥೆಯ ಗೋಷ್ಠಿಯಲ್ಲಿ ಪಾಲ್ಗೊಂಡರು. ಅಲ್ಲಿ ಒಬ್ಬ ವಿದೇಶಿ ವ್ಯಕ್ತಿ ಭಾರತೀಯರನ್ನು ಅವಮಾನ ಮಾಡಿದ್ದ. ಭಾರತೀಯರು ಭಿಕ್ಷೆ ಬೇಡುವವರು.ಭಿಕ್ಷೆ ಪಾತ್ರೆ ಜೊತೆ ಪಾಶ್ಚಿಮಾತ್ಯ ದೇಶಗಳಿಗೆ ಬರ್ತಾನೆ ಎಂದಿದ್ದ. ಇದು ವಿಜ್ಞಾನಿ ಮನಸ್ಸು ನೋಯಿಸಿತು. ಈ ಮಾತು ಹೃದಯದಲ್ಲಿ ಆಳಾವಾಗಿ ಬೇರೂರಿತು. ಈ ಅವಮಾನಕ್ಕೆ ತಕ್ಕ ಉತ್ತರ ನೀಡುವ ನಿರ್ಧಾರಕ್ಕೆ ಬಂದ್ರು ವಿಜ್ಞಾನಿ. ಭಾರತಕ್ಕೆ ವಾಪಸ್ ಬಂದು ಅವರು ಮಾಡಿದ ಕೆಲಸ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಸಕಾರಾತ್ಮಕ ಕ್ರಾಂತಿಗೆ ಕಾರಣವಾಯ್ತು. ವಿಜ್ಞಾನಿಯ ಕೆಲಸದಿಂದ ವಿಶ್ವದ ಜನತೆಗೆ ಲಾಭವಾಯ್ತು. ಈ ವಿಜ್ಞಾನಿ ಸಿದ್ಧಪಡಿಸಿದ ಲಸಿಕೆಯಿಂದಾಗಿ ವಿಶ್ವದಾದ್ಯಂತ ಮಾರಕ ರೋಗಕ್ಕೆ ಬಲಿಯಾಗ್ತಾ ಇದ್ದ ಲಕ್ಷಾಂತರ ಮಂದಿ ಮಕ್ಕಳ ಜೀವ ಉಳಿಯಿತು. ತಮ್ಮ ಮಕ್ಕಳೂ ಆರೋಗ್ಯವಾಗಿರಲಿ ಎಂಬ ಕಾರಣಕ್ಕೆ ಅನೇಕ ದೇಶಗಳು ಭಾರತದಲ್ಲಿ ಸಿದ್ಧವಾಗ್ತಿದ್ದ ಈ ಲಸಿಕೆಯನ್ನು ಆಮದು ಮಾಡಿಕೊಂಡವು. ಭಾರತ ಭಿಕ್ಷುಕರ ದೇಶವಲ್ಲ ಎಂಬುದನ್ನು ಈ ವಿಜ್ಞಾನಿ ಸಾಬೀತುಪಡಿಸಿದ್ರು.

ಈವರೆಗೆ ನಾವು ಮಾತನಾಡಿದ ಈ ವಿಜ್ಞಾನಿಯನ್ನು ವಿಶ್ವ ವರಪ್ರಸಾದ್ ರೆಡ್ಡಿ ಹೆಸರಿನಿಂದ ಕರೆಯುತ್ತದೆ. ಶಾಂತಾ ಬಯೋಟೆಕ್ನಿಕ್ ಸ್ಥಾಪಿಸಿದ ವರಪ್ರಸಾದ್ ರೆಡ್ಡಿ ಹೆಪಟೈಟಿಸ್ ಬಿ ಹಾಗೂ ಮಾರಣಾಂತಿಕ ರೋಗಗಳನ್ನು ಗುಣಪಡಿಸುವ ಲಸಿಕೆ ತಯಾರಿಸಿ ಸಮಂಜಸ ಬೆಲೆಗೆ ಲಸಿಕೆ ದೊರಕುವಂತೆ ಮಾಡಿದ್ರು. ಇದಕ್ಕಿಂತ ಮೊದಲು ಶ್ರೀಮಂತ ವ್ಯಕ್ತಿಗಳು ಮಾತ್ರ ತಮ್ಮ ಮಕ್ಕಳಿಗೆ ಹೆಪಟೈಟಿಸ್ ಬಿ ಲಸಿಕೆ ಹಾಕಿಸ್ತಾ ಇದ್ದರು. ಆದ್ರೆ ಶಾಂತಾ ಬಯೋಟೆಕ್ನಿಕ್ ಸಂಸ್ಥೆ ಸ್ಥಾಪಿಸಿದ ವರಪ್ರಸಾದ್ ರೆಡ್ಡಿ,ಲಸಿಕೆ ತಯಾರಿಸಿ ಕಡಿಮೆ ಬೆಲೆಗೆ ಜನಸಾಮಾನ್ಯರೂ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನೆರವಾದ್ರು. ಅಪರೂಪದ ಸಾಧನೆ ಹಾಗೂ ಸಮಾಜ ಸೇವೆಗಾಗಿ ವರಪ್ರಸಾದ್ ರೆಡ್ಡಿಯವರಿಗೆ ಅನೇಕ ಪ್ರಶಸ್ತಿಗಳು,ಗೌರವಗಳು ಬಂದಿವೆ.2005ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

image


ಹೈದ್ರಾಬಾದ್ ನ ಅವರ ನಿವಾಸದಲ್ಲಿ ಯುವರ್ ಸ್ಟೋರಿ ಜೊತೆ ಮಾತನಾಡಿದ ವರಪ್ರಸಾದ್ ರೆಡ್ಡಿ, ತಮ್ಮ ಜಿನಿವಾ ಅನುಭವವನ್ನು ಹಂಚಿಕೊಂಡರು.

" ನನ್ನ ಸಂಬಂಧಿಯ ಜೊತೆ ನಾನು ಜಿನೆವಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೆ. ಇದೇ ಮೊದಲ ಬಾರಿ ನಾನು ಆ ಸಮ್ಮೇಳದಲ್ಲಿ ಪಾಲ್ಗೊಂಡಿದ್ದರಿಂದ ನನಗೆ ಅಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ಸಿಕ್ತು. ಹೆಪಟೈಟಿಸ್ ಬಿ ಎಂದರೇನು ಎಂಬುದೇ ನನಗೆ ತಿಳಿದಿರಲಿಲ್ಲ. ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿದ್ದ ನನಗೆ ಈ ರೋಗದ ಬಗ್ಗೆ ಹಾಗೂ ಲಸಿಕೆಯ ಬಗ್ಗೆ ಗೊತ್ತಿರಲಿಲ್ಲ. ಸಮ್ಮೇಳದಲ್ಲಿ ಹೆಪಟೈಟಿಸ್ ಬಿ ನ ಬಗ್ಗೆ ಸಾಕಷ್ಟು ವಿಷಯಗಳು ಚರ್ಚೆಗೆ ಬಂದವು. 90ರ ದಶಕದ ಆರಂಭದ ದಿನಗಳಲ್ಲಿ ಭಾರತದಲ್ಲಿ ಸುಮಾರು 50 ಮಿಲಿಯನ್ ಜನರು ಹೆಪಟೈಟಿಸ್ ಬಿ ನಿಂದ ಬಳಲುತ್ತಿದ್ದರು. ಚೀನಾದಲ್ಲಿ 50 ಮಿಲಿಯನ್ ಮಂದಿ ಇದಕ್ಕೆ ಬಲಿಯಾಗಿದ್ದರು.ಕೇವಲ ಎರಡು ದೇಶಗಳಲ್ಲಿ ಮಾತ್ರ ಹೆಪಟೈಟಿಸ್ ಬಿ ಲಸಿಕೆ ತಯಾರಿಸಲಾಗುತ್ತಿತ್ತು. ಲಸಿಕೆ ಬಹಳ ದುಬಾರಿಯಾಗಿದ್ದರಿಂದ ಶ್ರೀಮಂತರು ಮಾತ್ರ ಇದನ್ನು ಹಾಕಿಸಿಕೊಳ್ಳುತ್ತಿದ್ದರು. ಭಾರತಕ್ಕೂ ಈ ಲಸಿಕೆ ಲಭ್ಯವಿತ್ತು. ಆದ್ರೆ ಜನಸಾಮಾನ್ಯರಿಗೆ ಈ ಲಸಿಕೆ ಮುಟ್ಟುವುದು ಕಷ್ಟಸಾಧ್ಯವಾಗಿತ್ತು. ಈ ವೇಳೆ ನನ್ನ ಬಳಿ ಯಾವುದೇ ನೌಕರಿ ಇರಲಿಲ್ಲ. ಯಾವುದೇ ಕೆಲಸವಿರಲಿಲ್ಲ. ಭಾರತದಲ್ಲಿ ಹೆಪಟೈಟಿಸ್ ಬಿ ಲಸಿಗೆ ತಯಾರಿಸಿ,ಜನಸಾಮಾನ್ಯರಿಗೆ ತಲುಪುವ ಬೆಲೆಯಲ್ಲಿ ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡೆ. ನನ್ನ ಮುಂದಿನ ಗುರಿ ಸ್ಪಷ್ಟವಾಗಿತ್ತು’’.

ವರಪ್ರಸಾದ್ ರೆಡ್ಡಿ ತಮ್ಮ ಗುರಿ ತಲುಪಲು ತಯಾರಿ ನಡೆಸಿದ್ರು. ವಿದೇಶದಿಂದ ವಾಪಸ್ ಬಂದ ಅವರು ಹೆಪಟೈಟಿಸ್ ಬಿ ಲಸಿಗೆ ತಯಾರಿಸುವತ್ತ ಗಮನ ಹರಿಸಿದ್ರು. ಹಂತ ಹಂತಕ್ಕೂ ಸಾಕಷ್ಟು ಸವಾಲುಗಳು ಮತ್ತು ತೊಂದರೆಗಳನ್ನು ಅವರು ಎದುರಿಸಬೇಕಾಯ್ತು. ವಿದೇಶಕ್ಕೆ ಹೋಗಿ ಹೆಪಟೈಟಿಸ್ ಬಿ ಫಾರ್ಮುಲಾ ಅರಿತುಕೊಂಡು ತವರಿಗೆ ತರುವಾಗ ಸಾಕಷ್ಟು ಅಪಮಾನಗಳನ್ನು ಎದುರಿಸಬೇಕಾಯ್ತು. ವಿದೇಶಿ ವ್ಯಕ್ತಿಯೊಬ್ಬನ ಮೂರು ವಿಷಯಗಳು ವರಪ್ರಸಾದ್ ಆಘಾತಕ್ಕೊಳಗಾಗುವಂತೆ ಮಾಡಿತ್ತು.

" ಆ ವ್ಯಕ್ತಿ ಮೂರು ವಿಷಯಗಳನ್ನು ಹೇಳಿದ್ದ. ಮೊದಲನೆಯದು, ಭಾರತೀಯರು ಭಿಕ್ಷುಕರು. ಅವರು ಪಾಶ್ಚಿಮಾತ್ಯ ದೇಶಗಳಿಗೆ ಬಂದು ಫಾರ್ಮುಲಾ ಬೇಡುತ್ತಾರೆ. ಎರಡನೆಯದು, ಒಂದು ವೇಳೆ ನಾವು ಫಾರ್ಮುಲಾ ನೀಡಿದರೂ ಭಾರತೀಯ ವಿಜ್ಞಾನಿಗಳಿಗೆ ಅರ್ಥವಾಗುವುದಿಲ್ಲ. ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳುವುದರಲ್ಲಿಯೇ ಅನೇಕ ವರ್ಷಗಳನ್ನು ಕಳೆಯುತ್ತಾರೆ ಎನ್ನುವ ಮೂಲಕ ಭಾರತೀಯ ವಿಜ್ಞಾನಿಗಳಿಗೆ ಅವಮಾನ ಮಾಡಿದ್ದ. ಮೂರನೆಯದಾಗಿ, ಭಾರತದಲ್ಲಿ ಸಾಕಷ್ಟು ಜನಸಂಖ್ಯೆ ಇದೆ. ಪ್ರತಿದಿನ ಸಾವಿರಾರು ಮಕ್ಕಳು ಹುಟ್ಟುತ್ತಾರೆ ಎಂದಿದ್ದ. ಈ ಮಾತಿನ ಅರ್ಥ ಹೆಪಟೈಟಿಸ್ ಬಿನಿಂದ ಮಕ್ಕಳು ಸಾವನ್ನಪ್ಪಿದರೆ ಯಾವುದೇ ನಷ್ಟವಿಲ್ಲ ಎಂಬುದಾಗಿತ್ತು.ಈ ವಿಷಯ ನನ್ನನ್ನು ಅಲುಗಾಡಿಸ್ತು. ಒಂದು ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು. ಆ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೆ,ನಡುವೆ ಈ ವಿಚಾರ ನನ್ನನ್ನು ಮತ್ತಷ್ಟು ಪಾತಾಳಕ್ಕೆ ತಳ್ತು.’’

ಭಾರತಕ್ಕೆ ವಾಪಸ್ ಆದ ವರಪ್ರಸಾದ್ ರೆಡ್ಡಿ ಶಾಂತಾ ಬಯೋಟೆಕ್ನಿಕ್ಸ್ ಏನೋ ತೆರೆದರು. ಆದ್ರೆ ಮುಂದಿನದು ಸವಾಲಿನ ಕೆಲಸವಾಗಿತ್ತು.ಈ ಸಮಯದಲ್ಲಿ ಭಾರತದಲ್ಲಿ ಯಾವುದೇ ಬಯೋ ಫಾರ್ಮ್ ಇರಲಿಲ್ಲ. ಹಲವಾರು ಕಾಲೇಜುಗಳಲ್ಲಿ ಜೈವಿಕ ತಂತ್ರಜ್ಞಾನವನ್ನು ಕಲಿಸಲಾಗ್ತಾಯಿತ್ತಷ್ಟೆ.

ಕಂಪನಿಗಾಗಿ ಕೆಲಸಗಾರರನ್ನು ಆಯ್ಕೆ ಮಾಡುವುದು ವರಪ್ರಸಾದ್ ರೆಡ್ಡಿಯವರಿಗೆ ದೊಡ್ಡ ಸವಾಲಾಗಿತ್ತು. ಹೇಗೆ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಚಿಂತನೆ ನಡೆಸಿದ್ರು. ಕೆಲಸಗಾರರನ್ನು ಆಯ್ಕೆ ಮಾಡಲು ಒಂದು ತಂತ್ರ ಅವಳವಡಿಸಿದ್ರು. ದೇಶಭಕ್ತಿ ಹಾಗೂ ದುಡಿಯುವ ಮನಸ್ಸಿರುವವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ರು. ಮನುಷ್ಯನ ವರ್ತನೆ ಸರಿ ಇದ್ದರೆ ಅವರಿಗೆ ಏನು ಬೇಕಾದ್ರೂ ಕಲಿಸಬಹುದೆಂಬುದು ವರಪ್ರಸಾದ್ ರೆಡ್ಡಿ ನಂಬಿಕೆಯಾಗಿತ್ತು. ಒಳ್ಳೆಯ ಆಲೋಚನೆ ಮಾಡುವ,ದೊಡ್ಡ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸುವ ವ್ಯಕ್ತಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿದರು. ಆರಂಭದಲ್ಲಿ ಅವರಿಗೆ ಹಣಕಾಸಿನ ಸಮಸ್ಯೆ ಕೂಡ ಎದುರಾಗಿತ್ತು. 1 ಕೋಟಿ ತೊಂಬತ್ತು ಲಕ್ಷ ಹಣ ಸಂಗ್ರಹಿಸಲು ಯಶಸ್ವಿಯಾಗಿದ್ದರು.

"ನಮ್ಮ ಉದ್ದೇಶ ದೇವರಿಗೂ ಇಷ್ಟವಾಗಿತ್ತು ಎಂದು ಕಾಣುತ್ತದೆ. ಹಾಗಾಗಿ ಓಮನ್ ರೂಪದಲ್ಲಿ ನಮಗೆ ಸಹಾಯ ಮಾಡಿದ್ದ. ಓಮನ್ ವಿದೇಶಾಂಗ ಸಚಿವಾಲಯಕ್ಕೆ ತಮ್ಮ ಯೋಜನೆ ಮೆಚ್ಚುಗೆಯಾಯ್ತು. ಹಾಗಾಗಿ ಎರಡು ಕೋಟಿ ರೂಪಾಯಿಯನ್ನು ಓಮನ್ ಹೂಡಿಕೆ ಮಾಡಿತ್ತು. ಇದಲ್ಲದೆ ಬ್ಯಾಂಕ್ ನಿಂದ ಸಾಲ ಕೊಡಿಸಲು ನೆರವಾಯ್ತು. ಇರದಿಂದ ಹೂಡಿಕೆ ಸಮಸ್ಯೆ ಬಗೆಹರಿಯಿತು.’’

ವರಪ್ರಸಾದ್ ರೆಡ್ಡಿಯವರಿಗೆ ಭಾರತೀಯ ಬ್ಯಾಂಕ್ ಗಳ ಮೇಲೆ ಕೋಪವಿದೆ. ಅವರು ಅನೇಕ ಬ್ಯಾಂಕ್ ಗಳಿಗೆ ಭೇಟಿ ನೀಡಿ ಲೋನ್ ಕೇಳಿದ್ದಾರೆ. ಆದ್ರೆ ಯಾವುದೇ ಬ್ಯಾಂಕ್ ಸಹಾಯ ಮಾಡಿಲ್ಲವಂತೆ. ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿರುವ ಇವರು ಹೆಪಟೈಟಿಸ್ ಬಿ ಲಸಿಕೆಯನ್ನು ಹೇಗೆ ತಯಾರಿಸ್ತಾರೆ ಎಂದು ಕೆಲ ಬ್ಯಾಂಕ್ ಪ್ರಶ್ನಿಸಿದ್ರೆ ಮತ್ತೆ ಕೆಲ ಬ್ಯಾಂಕ್ ಗಳು ಮಾರುಕಟ್ಟೆ ಬಗ್ಗೆ ಕೇಳಿದ್ದವಂತೆ. ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದರೂ ಬ್ಯಾಂಕ್ ಗಳು ಸಾಲ ನೀಡುವ ಮನಸ್ಸು ಮಾಡಿಲ್ಲವಂತೆ. ಜೊತೆಗೆ ಭಾರತ ಸರ್ಕಾರ ಕೂಡ ಸಹಾಯಕ್ಕೆ ಬರಲಿಲ್ಲವಂತೆ.

ಇದನ್ನು ಓದಿ: "ವಿರಾಟ್"​ ರೂಪಕ್ಕೆ ಬೆಚ್ಚಿಬಿದ್ದ ಕ್ರಿಕೆಟ್​ಲೋಕ

ದಾರಿಯುದ್ಧಕ್ಕೂ ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿದ ವರಪ್ರಸಾದ್ ರೆಡ್ಡಿ ಧೈರ್ಯದಿಂದ ಮುನ್ನೆಡೆದು ಯಶಸ್ಸು ಸಾಧಿಸಿದ್ರು. ಯಶಸ್ವಿಯಾಗಿ ಹೆಪಟೈಟಿಸ್ ಬಿ ಲಸಿಕೆ ತಯಾರಿಸಿದ್ರು. ಆದ್ರೆ ಲಸಿಕೆಗೆ ಪರವಾನಿಗೆ ಪಡೆಯುವ ವೇಳೆಯೂ ಅವರು ಸಾಕಷ್ಟು ಪರಿಶ್ರಮ ಪಡಬೇಕಾಯ್ತು. ಲಸಿಕೆಗೆ ಯಾವುದೇ ಪ್ರೋಟೋಕಾಲ್ ಅಥವಾ ಸೂಜಿ ಇರಲಿಲ್ಲ. ಇದನ್ನು ಕೂಡ ವರಪ್ರಸಾದ್ ರೆಡ್ಡಿಯವರೆ ಮಾಡಬೇಕಿತ್ತು. 1997ರ ಆಗಸ್ಟ್ ನಲ್ಲಿ ಶಾಂತಾ ಬಯೋಟೆಕ್ನಿಕ್ಸ್ ಹೆಪಟೈಟಿಸ್ ಬಿ ಲಸಿಕೆಯನ್ನು ಮಾರುಕಟ್ಟೆಗೆ ಬಿಟ್ಟಿತು. ಭಾರತ ಸ್ವಾತಂತ್ರವಾದ ಸಮಯದಲ್ಲಿ ಶಾಂತಾ ಬಯೋಟೆಕ್ನಿಕ್ಸ್ ಕೂಡ ಇತಿಹಾಸ ರಚಿಸ್ತು. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾಯ್ತು.

image


ಭಾರತದಲ್ಲಿ ಕಡಿಮೆ ಬೆಲೆಗೆ ಹೆಪಟೈಟಿಸ್ ಬಿ ಲಸಿಕೆ ಜನಸಾಮಾನ್ಯರಿಗೆ ತಲುಪುವಂತಾಯ್ತು. ಇದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಹೆಪಟೈಟಿಸ್ ಬಿ ಲಸಿಕೆಯ ಬೆಲೆಯನ್ನು ಕಡಿಮೆ ಮಾಡುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನಿವಾರ್ಯವಾಯ್ತು. ವರಪ್ರಸಾದ್ ರೆಡ್ಡಿ ಹೆಪಟೈಟಿಸ್ ಬಿ ಲಸಿಕೆ ನಂತ್ರ ಅನೇಕ ಲಸಿಕೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಭಾರತದ ನೆರೆ ದೇಶ ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳು ಹೆಪಟೈಟಿಸ್ ಲಸಿಕೆಯನ್ನು ಭಾರತದ ಶಾಂತಾ ಬಯೋಟೆಕ್ನಿಕ್ಸ್ ನಿಂದ ಖರೀದಿಸುತ್ತಿವೆ. ಆಶ್ಚರ್ಯ ಎಂದ್ರೆ ಭಾರತದಲ್ಲಿಯೇ ಈ ಲಸಿಕೆ ಸಿದ್ಧವಾದ್ರೂ ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಪಟ್ಟಿಯಲ್ಲಿ ಈ ಲಸಿಕೆಯ ಹೆಸರಿರಲಿಲ್ಲ. 14 ವರ್ಷಗಳ ನಂತ್ರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಅಳವಡಿಸಲಾಯ್ತು. ಬೇಸರದ ಸಂಗತಿ ಎಂದ್ರೆ ಕೆಲ ಮಂತ್ರಿಗಳು ಇದನ್ನು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲು ಲಂಚ ಕೇಳಿದ್ದರಂತೆ. ಆದ್ರೆ ತತ್ವದ ಮೇಲೆ ವಿಶ್ವಾಸವಿದ್ದ ರೆಡ್ಡಿ ಲಂಚ ನೀಡಲಿಲ್ಲವಂತೆ.

ವರಪ್ರಸಾದ್ರ ರೆಡ್ಡಿ ನವೆಂಬರ್ 17,1948ರಲ್ಲಿ ಆಂಧ್ರದ ನೆಲ್ಲೂರು ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ರೈತ. ತಾಯಿ ಗೃಹಿಣಿ.ತಂದೆ ಆರನೇ ಗ್ರೇಡ್ ಮುಗಿಸಿದ್ದರೆ ತಾಯಿ ಎಂಟನೇ ಗ್ರೇಡ್ ಮುಗಿಸಿದ್ದರು. ಸಾಕಷ್ಟು ಜಮೀನು ಮನೆಯಲ್ಲಿತ್ತು. ತುಂಬು ಕುಟುಂಬದಲ್ಲಿ ಜನಿಸಿದ್ದ ವರಪ್ರಸಾದ್ ರೆಡ್ಡಿಯವರನ್ನು ಅವರ ತಾಯಿ ತಮ್ಮನ ಮನೆಗೆ ಕಳುಹಿಸಿದ್ರು. ವರಪ್ರಸಾದ್ ರೆಡ್ಡಿ ನೆಲ್ಲೂರಿನಲ್ಲಿ ಮಾವನ ಜೊತೆ ವಿದ್ಯಾಭ್ಯಾಸ ಮಾಡ್ತಾ ಇದ್ದರು. ಮಾವ ಸಮಾಜ ಸೇವಕರಾಗಿದ್ದರು. ತಮ್ಮ ಆಸ್ತಿಯನ್ನು ಕಮ್ಯುನಿಷ್ಟ್ ಪಕ್ಷಕ್ಕೆ ಬರೆದುಕೊಟ್ಟಿದ್ದ ಸೋದರ ಮಾವ ಮದುವೆ ಕೂಡ ಆಗಿರಲಿಲ್ಲ. ಅವರ ಕೆಲಸ ಕಾರ್ಯಗಳನ್ನು ನೋಡುತ್ತ ಬೆಳೆದ ವರಪ್ರಸಾದ್ ರೆಡ್ಡಿ, ಚಿಕ್ಕವರಿರುವಾಗಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಮ್ಮನ ಮೇಲೆ ಅಪಾರ ಪ್ರೀತಿ ಗೌರವವಿದೆ. ಹಾಗಾಗಿಯೇ ತಮ್ಮ ಮೊದಲ ಕಂಪನಿಗೆ ಅಮ್ಮನ ಹೆಸರಿಟ್ಟಿದ್ದಾರೆ.

image


ಒಂದು ಕಡೆ ದೇವರನ್ನು ನಂಬುವ ಅಮ್ಮ,ಇನ್ನೊಂದು ಕಡೆ ಜನ ಸೇವೆಯನ್ನು ಬಲವಾಗಿ ನಂಬಿರುವ ಸೋದರ ಮಾವ. ಇವರಿಬ್ಬರಲ್ಲಿ ಯಾರ ದಾರಿಯಲ್ಲಿ ಸಾಗಬೇಕೆಂಬ ಗೊಂದಲ ವರಪ್ರಸಾದ್ ರೆಡ್ಡಿಯವರನ್ನು ಕಾಡಿತ್ತು. ಆದ್ರೆ ಅವರು ಮಧ್ಯಮ ಮಾರ್ಗವನ್ನು ಅನುಸರಿಸುವ ನಿರ್ಧಾರಕ್ಕೆ ಬಂದರು. ಹಾಗೆ ತೆಲುಗು ಶಿಕ್ಷಕಿಯೊಬ್ಬರ ಪ್ರಭಾವಕ್ಕೊಳಗಾಗಿದ್ದರು. ತೆಲುಗು ಭಾಷೆ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ತೋರಿದ್ದ ವರಪ್ರಸಾದ್ ರೆಡ್ಡಿ ತೆಲುಗು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮಾಡಲು ನಿರ್ಧರಿಸಿದ್ದರು. ಆದ್ರೆ ಭಾರತದಲ್ಲಿ ಉತ್ತಮ ಎಂಜಿನಿಯರ್ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಸಹೋದರ ಮಾವ, ಬಲವಂತವಾಗಿ ಎಂಜಿನಿಯರಿಂಗ್ ಗೆ ಸೇರಿಸಿದ್ರು.

1997ರಲ್ಲಿ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ ಸಿ ಪದವಿ ಪಡೆದ್ರು. ನಂತ್ರ ಕಾಕಿನಾಡಿನಲ್ಲಿ 1970ರಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ್ರು. ನಂತ್ರ ಕಂಪ್ಯೂಟರ್ ಸೆನ್ಸ್ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳಿದ್ರು.ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಮಾಡಿದ ರೆಡ್ಡಿ,ಜರ್ಮನಿಯ ಕಾನೂನು,ಜನರ ಸಂಸ್ಕೃತಿಯ ಬಗ್ಗೆ ಸಾಕಷ್ಟು ಪ್ರಭಾವಿತರಾಗಿದ್ದರು. ಈ ನಡುವೆ ಅಮೆರಿಕಾಕ್ಕೆ ಕೂಡ ಅವರು ಹೋಗಿದ್ದರು. ಆದ್ರೆ ಅಮೆರಿಕಾ ಇಷ್ಟವಾಗಲಿಲ್ಲ. ಪ್ರವಾಸಕ್ಕೆ ಮಾತ್ರ ಅಮೆರಿಕಾ ಯೋಗ್ಯ. ಕೆಲಸ ಹಾಗೂ ವಾಸಕ್ಕೆ ಅದು ಸರಿಯಾದ ಜಾಗವಲ್ಲ ಎನ್ನುತ್ತಾರೆ ವರಪ್ರಸಾದ್ ರೆಡ್ಡಿ. 1971-72ರಲ್ಲಿ ಭಾರತಕ್ಕೆ ವಾಪಸ್ಸಾದ ರೆಡ್ಡಿಯವರಿಗೆ ಹೈದರಾಬಾದ್ ಮೂಲದ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಲ್ಯಾಬೋರೇಟರೀಸ್ ನಲ್ಲಿ ಕೆಲಸ ಸಿಗ್ತು. ಆದ್ರೆ ಅಲ್ಲಿನ ಕೆಲಸ ಅವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಕೆಲಸ ಬಿಟ್ಟರು. ಈ ನಡುವೆ 1977ರಲ್ಲಿ ಆಂಧ್ರಪ್ರದೇಶದ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಿಗಮದ ವ್ಯವಸ್ಥಾಪಕ ನಿರ್ದೇಶ ಡಾ. ರಾಮ್, ವರಪ್ರಸಾದ್ ರೆಡ್ಡಿಯವರಿಗೆ ಆಫರ್ ನೀಡಿದ್ದರು. ಡಾ. ರಾಮ್ ಪ್ರಾಮಾಣಿಕತೆ ತಿಳಿದಿದ್ದ ವರಪ್ರಸಾದ್ ರೆಡ್ಡಿ ಕೆಲಸಕ್ಕೆ ಓಕೆ ಎಂದ್ರು. ಆದ್ರೆ ಕೆಲ ದಿನಗಳ ಕಾಲ ಕೆಲಸ ಮಾಡಿದ ಅವರಿಗೆ ಅಲ್ಲಿನ ಸಮಸ್ಯೆ, ರಾಜಕೀಯವೆಲ್ಲ ಅರಿವಿಗೆ ಬಂತು. ಹಾಗಾಗಿ ಆ ಕೆಲಸವನ್ನೂ ವರಪ್ರಸಾದ್ ರೆಡ್ಡಿ ತೊರೆದ್ರು.

image


ರಾಜ್ಯ ಸರ್ಕಾರದ ಕೆಲಸ ಬಿಟ್ಟ ಅವರು ಉದ್ಯೋಗ ಶುರುಮಾಡುವ ನಿರ್ಧಾರಕ್ಕೆ ಬಂದರು. ಗುರಿ ಸ್ಪಷ್ಟವಾಗಿತ್ತು. ಈ ನಡುವೆ ಹೈದ್ರಾಬಾದ್ ಬ್ಯಾಟರಿ ಎಂಬ ಕಂಪನಿ ಮುಳುಗುವ ಹಂತದಲ್ಲಿತ್ತು. ಸಾಕಷ್ಟು ನಷ್ಟದಿಂದ ಬಳಲ್ತಾ ಇತ್ತು. ಇದ್ರ ಬಗ್ಗೆ ತಿಳಿದ ವರಪ್ರಸಾದ್ ರೆಡ್ಡಿ ಆ ಕಂಪನಿಯ ಪಾರ್ಟನರ್ ಆದ್ರು. ಹಗಲು ರಾತ್ರಿ ಎನ್ನದೆ ಆ ಕಂಪನಿಗಾಗಿ ದುಡಿದ್ರು. ದಿನ ಕಳೆದಂತೆ ಕಂಪನಿ ಸಾಕಷ್ಟು ಹೆಸರು ಮಾಡ್ತು. ಲಾಭ ಕೂಡ ಸಿಗ್ತು. ಈ ನಡುವೆ ಸರ್ಕಾರಕ್ಕೆ ತೆರಿಗೆ ನೀಡಿಬಾರದೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಯಲ್ಲಿ ಭಿನ್ನಾಭಿಪ್ರಾಯಗಳು ಕೇಳಿ ಬಂದವು. ಇದೇ ವಿಚಾರಕ್ಕೆ ಕಂಪನಿ ವರಪ್ರಸಾದ್ ರೆಡ್ಡಿ ಜೊತೆ ಕೆಟ್ಟದಾಗಿ ನಡೆದುಕೊಂಡಿತಲ್ಲದೆ ಅವರನ್ನು ಕಂಪನಿಯಿಂದ ಹೊರ ಹಾಕಿತು. ಆಗ ಸಾಕಷ್ಟು ನೋವನ್ನನುಭವಿಸಿದ್ದರು ರೆಡ್ಡಿ. ಎಷ್ಟೇ ಅವಮಾನ ಮಾಡಿದ್ದರೂ ಆ ಕಂಪನಿಯನ್ನು ಗೌರವಿಸುತ್ತಾರೆ. ಕಂಪನಿಯಿಂದ ಸಾಕಷ್ಟು ಹೆಸರು,ಗೌರವ ಸಿಕ್ಕಿದ್ದಲ್ಲದೆ,ಏನು ಮಾಡಬೇಕು?ಏನು ಮಾಡಬಾರದು ಎಂಬುದನ್ನು ಕಲಿತೆ ಎಂದಿದ್ದಾರೆ.

ಹೈದ್ರಾಬಾದ್ ಬ್ಯಾಟರಿಯಿಂದ ಹೊರಬಿದ್ದ ನಂತ್ರ ಏನಾಯ್ತು ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಆದ್ರೆ ಶಾಂತಾ ಬಯೋಟೆಕ್ನಿಕ್ಸ್ ಹಣಕಾಸಿನ ಜೊತೆ ಮುಂದಾಲೋಚನೆಯೊಂದಿಗೆ ಶುರುವಾಗಿದ್ದಲ್ಲ. ನನ್ನನ್ನು ಕೆರಳಿಸಲಾಯ್ತು. ಪ್ರಚೋದಿಸಿದ ಕಾರಣ ನಾನು ಕಂಪನಿ ತೆರೆದೆ ಹಾಗೂ ವಿದೇಶಿ ವ್ಯಕ್ತಿಗೆ ತಕ್ಕ ಉತ್ತರ ನೀಡಿದ್ದೆ ಎನ್ನುತ್ತಾರೆ ರೆಡ್ಡಿ.

ಲೇಖಕರು: ಅರವಿಂದ ಯಾದವ್​ 

ಇದನ್ನು ಓದಿ:

1. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

2. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!

3. "ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!