Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ

ಟೀಮ್ ವೈ.ಎಸ್.ಕನ್ನಡ 

ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ

Monday July 18, 2016 , 2 min Read

ಟ್ರಾಫಿಕ್ ಸಮಸ್ಯೆ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ. ವಾಹನ ದಟ್ಟಣೆಯಿಂದ ಸಂಚಾರ ಮಾತ್ರವಲ್ಲ ಜನಸಾಮಾನ್ಯರ ಬದುಕು ಕೂಡ ಅಸ್ತವ್ಯಸ್ತವಾಗುತ್ತಿದೆ. ದೈಹಿಕ ನೋವು, ತೀವ್ರವಾದ ಭಾವನಾತ್ಮಕ ಒತ್ತಡ, ಮನೆಯಲ್ಲಿ ಕದಡಿದ ಸಂಬಂಧಗಳು ಹೀಗೆ ಟ್ರಾಫಿಕ್ ಕಿರಿಕಿರಿಯ ಅವಾಂತರಗಳು ಒಂದೆರಡಲ್ಲ. ಸಂಚಾರ ದಟ್ಟಣೆ ಜನಜೀವನದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತಿದೆ ಅನ್ನೋದನ್ನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯೊಂದರಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ.

image


``ಕೆಟ್ಟ ಸಂಚಾರ ವ್ಯವಸ್ಥೆ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ವ್ಯಕ್ತಿಯ ಮೇಲೆ ಹೆಚ್ಚುವರಿ ಒತ್ತಡಕ್ಕೆ ಕಾರಣವಾಗುತ್ತದೆ'' ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಡಾ.ಸೀಮಾ ಪ್ರಧಾನ್. ಸಂಚಾರ ದಟ್ಟಣೆಯಿಂದಾಗಿ ಉದ್ಭವಿಸುವ ಹತಾಶೆ ಸಾಮಾನ್ಯವಾಗಿ ಸ್ನೇಹಿತರು ಮತ್ತು ಕುಟುಂಬದವರ ಮೇಲೆ ದುಷ್ಪರಿಣಾಮ ಬೀರುತ್ತದೆ ಅನ್ನೋದು ಅವರ ಅಭಿಪ್ರಾಯ. ಇದು ಸಂಬಂಧಗಳನ್ನು ಹದಗೆಡಿಸುವುದು ಮಾತ್ರವಲ್ಲದೆ ಇನ್ನಷ್ಟು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಕಿರಿಕಿರಿ ಉಂಟಾಗುತ್ತದೆ ಜೊತೆಗೆ ದಿನದ ಆರಂಭದಲ್ಲೇ ನಿಮ್ಮ ಮನಸ್ಥಿತಿ ಕೂಡ ಹದಗೆಡುತ್ತದೆ. ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗದೆ ಹತಾಶೆ ಕೂಡ ಹೆಚ್ಚುತ್ತದೆ.

ಇನ್ನು ಟ್ರಾಫಿಕ್ ಕಿರಿಕಿರಿಯಿಂದ ಉಂಟಾಗುವ ರಕ್ತದೊತ್ತಡ ಹಾಗೂ ಬಳಲಿಕೆ ದೀರ್ಘಾವಧಿವರೆಗೆ ಕೆಟ್ಟ ಪರಿಣಾಮ ಉಂಟು ಮಾಡಬಹುದು ಅನ್ನೋದು ಅಪೊಲೊ ಆಸ್ಪತ್ರೆಯ ವೈದ್ಯರಾದ ಡಾ.ರಾಜೀವ ಮೋಗರ್ ಅವರ ಎಚ್ಚರಿಕೆಯ ನುಡಿ. ``ವ್ಯಕ್ತಿಯಲ್ಲಿ ಆತಂಕ ಮತ್ತು ಆಕ್ರಮಣಶೀಲತೆಯ ಹೆಚ್ಚಳ ಟ್ರಾಫಿಕ್‍ನ ಕೊಡುಗೆ. ಎಲ್ಲ ಸಂದರ್ಭಗಳಲ್ಲೂ ಶಾಂತವಾಗಿರುವುದು ಅಸಾಧ್ಯ ಎಂದೆನಿಸಿದೆ. ಒಬ್ಬ ವ್ಯಕ್ತಿ ಹತಾಶೆಗೊಂಡಾಗ ಅದು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ, ಅದರಿಂದ ಅವರ ಜೀವನ ಕ್ರಮದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದು ಸಹಜ. ಯಾಕೆಂದರೆ ಆರೋಗ್ಯವಂತರಾಗಿರಲು ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಅತ್ಯಂತ ಅವಶ್ಯಕ'' ಅನ್ನೋದು ಡಾ.ರಾಜೀವ ಅವರ ಹಿತನುಡಿ.

ಸಂಚಾರ ಸಂಬಂಧಿ ಸಮಸ್ಯೆಗಳನ್ನು ತಡೆದುಕೊಳ್ಳಲು ಪ್ರಯಾಣಿಕರಿಗೆ ಸಾಧ್ಯವಾಗುತ್ತಿಲ್ಲ. ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ಸಿಕ್ಕು ಒದ್ದಾಡುವುದರಿಂದ ಒತ್ತಡ ಮತ್ತು ನೋವು ಹೆಚ್ಚಾಗಿದೆ ಅನ್ನೋದು ಕೆಂಗೇರಿಯ ಯುವ ಉದ್ಯಮಿ ಸುಹಾಸ್ ಶ್ರೀರಾಮ್ ಅವರ ಅನುಭವದ ಮಾತು. ``ಯಾವುದೇ ಸ್ಥಳವನ್ನು ತಲುಪಬೇಕೆಂದರೆ ನಿರ್ದಿಷ್ಟ ಸಮಯಕ್ಕಿಂತ ಮೊದಲೇ ಹೊರಡಬೇಕು. ಇದರಿಂದ ಎಲ್ಲವೂ ಏರುಪೇರಾಗುತ್ತವೆ. ದೈಹಿಕ ಒತ್ತಡ ಉಂಟಾದಾಗ ನಾವು ಭಾವನಾತ್ಮಕವಾಗಿಯೂ ಒತ್ತಡಕ್ಕೆ ಒಳಗಾಗುತ್ತೇವೆ'' ಎನ್ನುತ್ತಾರೆ ಸುಹಾಸ್.

ಇದರಿಂದಾಗಿ ವಾಹನ ಚಾಲನೆ ಸಂದರ್ಭದಲ್ಲಿ ಸಿಟ್ಟು, ಸೆಡವು ಹೆಚ್ಚಾಗುತ್ತದೆ. ಅಪಘಾತಗಳ ಸಂಖ್ಯೆ ಅಧಿಕವಾಗಲು ಕೂಡ ಇದು ಕಾರಣ. ಕೇವಲ ಘಟನೆಯಲ್ಲಿ ಭಾಗಿಯಾದವರು ಮಾತ್ರವಲ್ಲದೆ ಉಳಿದ ಪ್ರಯಾಣಿಕರು ಕೂಡ ಸಿಟ್ಟಿಗೇಳುವ ಸಂದರ್ಭಗಳೇ ಹೆಚ್ಚು. ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿರೀಶ್ ಕುಮಾರ್, ಟ್ರಾಫಿಕ್ ಸಮಸ್ಯೆಯಿಂದ ಕಂಗಾಲಾಗಿ ಕುಟುಂಬದೊಂದಿಗೆ ಕಚೇರಿ ಸಮೀಪದಲ್ಲೇ ಇರುವ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರಂತೆ. ಆದ್ರೆ ಅದರಿಂದೇನೂ ಪ್ರಯೋಜನವಾಗಿಲ್ಲ. ``ರಸ್ತೆಯುದ್ದಕ್ಕೂ ನಮಗಾದ ಅನುಭವದ ಮೇಲೆ ನಮ್ಮ ಮೂಡ್ ಬದಲಾಗುತ್ತದೆ. ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಾಗ ಶಾಂತವಾಗಿರುವುದು ಅಸಾಧ್ಯ. ನಿಮ್ಮ ತಪ್ಪಿಲ್ಲದೇ ಇದ್ದರೂ ಮೂರನೇ ವ್ಯಕ್ತಿ ಮಾಡಿದ ಯಡವಟ್ಟಿನಿಂದ ನೀವು ಜಗಳಕ್ಕಿಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಬೆಳ್ಳಂಬೆಳಗ್ಗೆ ಕೂಗುತ್ತ, ಚೀರುತ್ತ ಜನರನ್ನು ಕೆರಳಿಸುವುದು ನಿಜಕ್ಕೂ ಬೇಸರದ ಸಂಗತಿ'' ಎನ್ನುತ್ತಾರೆ ಸಿರೀಶ್.

ಇನ್ನು ಮಹಾಲಕ್ಷ್ಮಿ ಸಂಜಯ್ ಅವರು ಪ್ರತಿನಿತ್ಯ ಮೈಸೂರು ರೋಡ್‍ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸ್ತಾರೆ. ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಸಂಬಂಧಗಳಲ್ಲೂ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಮಹಾಲಕ್ಷ್ಮಿ. ``ಹಲವು ಬಾರಿ ಟ್ರಾಫಿಕ್‍ನಿಂದಾಗಿ ನಿಗದಿತ ಸಮಯಕ್ಕೆ ಮನೆ ತಲುಪಲಾಗದೆ ನನ್ನ ಇಡೀ ದಿನದ ವೇಳಾಪಟ್ಟಿಯೇ ಹಾಳಾಗಿ ಹೋಗಿದೆ. ಅಸ್ತವ್ಯಸ್ತವಾಗಿರುವ ಸಂಚಾರ ನನ್ನ ನಿದ್ದೆಗೂ ಅಡ್ಡಿಯಾಗಿದೆ. ಕೆಲಸದ ಸಮಯದಲ್ಲಿ ಬ್ರೇಕ್‍ಗೆ ಹೋಗಲು ಅವಕಾಶವಿದ್ದರೂ ಆ ಸಮಯವನ್ನೆಲ್ಲ ಟ್ರಾಫಿಕ್‍ನಲ್ಲೇ ಕಳೆಯಬೇಕಾಗಿರುವುದರಿಂದ ಮನೆಯವರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಭಯಾನಕ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಅಂದ್ರೆ ಎಲ್ಲರೂ ಸಾರ್ವಜನಿಕ ಸಾರಿಗೆ ಬಳಸುವುದು, ಇಲ್ಲವೇ ಕ್ಯಾಬ್ ಶೇರಿಂಗ್ ವ್ಯವಸ್ಥೆ ಕೂಡ ಜಾರಿ ಮಾಡಬಹುದು'' ಅನ್ನೋದು ಮಹಾಲಕ್ಷ್ಮಿ ಅವರ ಅಭಿಪ್ರಾಯ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿ ಜನರಿಗೆ ಮಾರಕವಾಗುತ್ತಿರುವುದಂತೂ ಸುಳ್ಳಲ್ಲ. 

ಇದನ್ನೂ ಓದಿ...

ನಾರಿಯರು ಸೀರೆ ಉಟ್ಕೊಂಡೇ ಓಡ್ಬಹುದು : ಮಿಲಿಂದ್ ಸೋಮನ್​ ಹೊಸ ಐಡಿಯಾ 

ಕಬಾಲಿಯಿಂದ ಕಲಿಬೇಕು ಪ್ರಚಾರಕಲೆ