ಆರಂಭವಾಗಿದ್ದು 2 ಲಕ್ಷದಿಂದ.. ಈಗ 2 ಕೋಟಿಯ ವಹಿವಾಟು..!
ಟೀಮ್ ವೈ.ಎಸ್. ಕನ್ನಡ
ಐದು ಜನ ಗೆಳೆಯರು ಒಂದೇ ತರಹದ ಟಿ-ಶರ್ಟ್ಗಳನ್ನು ಧರಿಸಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಸಾಮಾನ್ಯವಾಗಿ ಶಾಲೆ,ಕಾಲೇಜುಗಳಲ್ಲಿ ಒಂದೊಂದು ಗುಂಪಿರುತ್ತಿತ್ತು. ತಮ್ಮ ನಾಲ್ಕೈದು ಗೆಳೆಯರು ಒಟ್ಟಿಗೆ ಸೇರಿ ಒಂದೇ ತರಹದ ಟಿ- ಶರ್ಟ್ಗಳನ್ನು ಧರಿಸಿ ತಾವು ಸೂಪರ್ ಎಂದು ತಮ್ಮ ಇನ್ನಿತರ ಗೆಳೆಯರ ಮುಂದೆ ಮತ್ತು ತರಗತಿಗಳಲ್ಲಿ ಮಿಂಚುತ್ತಿದ್ದರು. ಇದನ್ನು ಎನ್ಕ್ಯಾಶ್ ಮಾಡಿಕೊಂಡಿರುವ ಕೆಲ ಇ-ಕಾಮರ್ಸ್ ತಾಣಗಳು ಒಂದೇ ವಿನ್ಯಾಸದ ಟಿ ಶರ್ಟ್ಗಳನ್ನು ಮಾಡಿಕೊಟ್ಟು ಲಾಭ ಗಳಿಸುತ್ತಿವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಸರು ಮಾಡಿರುವುದು ಇನರ್ಷಿಯಾ ಕಾರ್ಟ್ ಕಾರ್ಖಾನೆಯ ಟಿ ಶರ್ಟ್ಗಳು ಫೇಮಸ್ ಆಗುತ್ತಿವೆ.

ಕಾಲೇಜು ಸಮಯದಲ್ಲಿ ಹುಡೀಸ್ ಟಿ ಶರ್ಟ್ ಡಿಸೈನಿನ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ ದರ್ಶನ್ ದೇಸಾಯಿ ಎಂಬ ಯುವಕನ ಸಾಹಸವೇ ಇನರ್ಷಿಯಾ ಕಾರ್ಟ್. ಪಾರ್ಟ್ ಟೈಮ್ ಜಾಬ್ ಆಗಿದ್ದ ಈ ಟಿ ಶರ್ಟ್ ಡಿಸೈನ್ ಅನ್ನು ಫುಲ್ ಟೈಮ್ ವ್ಯಾಪಾರವನ್ನಾಗಿ ಮಾಡಲು ಯೋಚಿಸಿ ಸ್ನೇಹಿತ ಭರತ್ ಜೊತೆಗೆ ಚರ್ಚಿಸಿದಾಗ ಅವರು ಇದಕ್ಕೆ ಜೊತೆಯಾದರು. ಆಗ ತಯಾರದದ್ದೆ ಈ ಇನರ್ಷಿಯಾ ಕಾರ್ಟ್. ದರ್ಶನ್ ಮತ್ತು ಭರತ್ ಅವರು ಜಂಟಿಯಾಗಿ 2015ರ ಜನವರಿಯಲ್ಲಿ ಎರಡು ಲಕ್ಷ ಹೂಡಿಕೆಯೊಂದಿಗೆ ಆರಂಭವಾದ ಈ ಟಿ ಶರ್ಟ್ ಡಿಸೈನ್ ಕಂಪನಿ, ಇದು ಎರಡು ಕೋಟಿ ವ್ಯವಹಾರ ಮಾಡುತ್ತಿದೆ ಎಂದರೆ ನಂಬಲೇಬೇಕು.
ಈ ಟಿ ಶರ್ಟ್ ಡಿಸೈನ್ ಮಾಡಿ ಮಾರಾಟ ಮಾಡುವ ವಿಭಾಗದಲ್ಲಿ ಹಲವು ಸ್ಟಾರ್ಟ್ಅಪ್ಗಳಿದ್ದರೂ ಸ್ನೇಹಿತರಿಬ್ಬರ ಶ್ರಮ ಮತ್ತು ಗುಣಮಟ್ಟದ ವಸ್ತುಗಳ ನೀಡಿಕೆಯೇ ಈ ಯಶಸ್ಸಿಗೆ ಕಾರಣ.
ಏನೇನು ಸಿಗುತ್ತದೆ..?
ಈ ಕಾರ್ಟ್ನಲ್ಲಿ ಗ್ರಾಹಕರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಟಿ ಶರ್ಟ್, ಹುಡೀಸ್, ಜಾಕೆಟ್, ಶರ್ಟ್, ಹೀಗೆ ಸಾಕಷ್ಟು ವಸ್ತುಗಳು ಇಲ್ಲಿ ದೊರೆಯುತ್ತವೆ. ಉತ್ತಮ ಮೆಟಿರಿಯಲ್ಗಳಿಂದ ಬಟ್ಟೆಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ.

ಬೆಲೆ ಎಷ್ಟು..?
ಒಂದು ಹುಡಿ ಟಿ ಶರ್ಟ್ ಅಥವಾ ಜಾಕೆಟ್ಗೆ 450 ರೂಪಾಯಿ ಚಾರ್ಜ್ ಮಾಡಿದರೆ, ಪ್ರಿಂಟೆಡ್ ಟಿ ಶರ್ಟ್ಗೆ 195 ರೂಪಾಯಿ ಆಗುತ್ತದೆ. ಬಟ್ಟೆಯ ಹೊಲಿಗೆಗೆ ಪ್ರತ್ಯೇಕ ಫ್ಯಾಕ್ಟರಿ ಇದ್ದರೆ, ಡಿಸೈನಿಂಗ್ ಪ್ರಿಂಟಿಂಗ್ಗೆ ಪ್ರತ್ಯೇಕ ಫ್ಯಾಕ್ಟರಿ ಇದೆ. ಬೇಸಿಗೆಯಲ್ಲಿ ಟಿ ಶರ್ಟ್ಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಜಾಕೆಟ್, ಪುಲ್ ಓವರ್ಗಳನ್ನು ಹೆಚ್ಚು ಮಾರಾಟ ಮಾಡುತ್ತಾರೆ. ಇವರಿಗೆ ಕಾರ್ಪೋರೇಟ್ ವಲಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಷ್ಟೇ ಅಲ್ಲದೆ ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಬಿಷಪ್ ಕಾಟನ್, ಮೌಂಟ್ ಕಾರ್ವಲ್ ಕಾಲೇಜುಗಳಿಗೂ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಶ್ರೀನಗರದಲ್ಲಿರುವ ಭಾರತೀಯ ವಾಯುಪಡೆ ಸಿಬ್ಬಂದಿಗೂ ಸಮವಸ್ತ್ರಗಳನ್ನು ಅವರು ಸಿದ್ಧಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಿಂ-ಬಯೋಸಿಸ್ನಂತಹ ಸಾಕಷ್ಟು ಕಾರ್ಪೋರೆಟ್ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು ವಿವಿಧ ವಿನ್ಯಾಸದ ಬಟ್ಟೆಗಳಿಗಾಗಿ ಇನರ್ಷಿಯಾ ಕಾರ್ಟ್ಗೆ ಆರ್ಡರ್ ನೀಡಿದ್ದಾರೆ.
ಇದನ್ನು ಓದಿ: ಇದು ಫೋಟೋಗಳು ಕಥೆ ಹೇಳೊ ಸಮಯ
ಮುಂದಿನ ಯೋಜನೆ
ಗ್ರಾಮೀಣ ಪ್ರದೇಶಕ್ಕೂ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸುವ ಯೋಜನೆಯನ್ನು ದರ್ಶನ್ದೇಸಾಯ್ ಅವರು ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂಬಂತೆ ಧಾರವಾಡದ ಬಳಿಯ ಇಟಿಗಟ್ಟಿಯ 50 ಮಹಿಳೆಯರಿಗೆ ತರಬೇತಿಯೊಂದಿಗೆ ನೌಕರಿ ಅವಕಾಶ ನೀಡಲು ಮುಂದಾಗಿದ್ದಾರೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇಂತಹದ್ದೆ ಪ್ರಯೋಗವನ್ನು ರಾಜ್ಯಾದ್ಯಾಂತ ಮಾಡುವ ಯೋಚನೆಯಿದೆ.
ಸದ್ಯಕ್ಕೆ ಬೆಂಗಳೂರಿನ ಸಂಜಯನಗರದಲ್ಲಿ ಕಚೇರಿ ಹೊಂದಿರುವ ದರ್ಶನ್ ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ಕಚೇರಿ ತೆರೆದು ತಮ್ಮ ಕೆಲಸವನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಿನಲ್ಲಿ ನಿಮಗೂ ಒಂದೇ ಡಿಸೈನ್ ಟಿ-ಶರ್ಟ್ ಬೇಕಿದ್ದರೆ ಇನರ್ಷಿಯಾ ಕಾರ್ಟ್ಗೆ ಭೇಟಿ ನೀಡಿದರೆ ಸಾಕು.
1. ಹಿರಿಯ ಐಎಎಸ್ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ