ಟಾಯ್ಲೆಟ್ಗೆ ಹೋಗೋದಿಕ್ಕೆ ಅರ್ಜೆಂಟಾ...ಶೌಚಾಲಯ ಹುಡುಕಲೊಂದು ಅಪ್ಲಿಕೇಷನ್..!
ಅಗಸ್ತ್ಯ
ನೀವು ಎಲ್ಲಿಗೋ ಅರ್ಜೆಂಟಾಗಿ ಹೋಗುತ್ತಿರುತ್ತಿರಿ. ಇದಕ್ಕಿದ್ದಂತೆ ನೈಸರ್ಗಿಕ ಕರೆ ಬರುತ್ತದೆ. ಏನು ಮಾಡುವುದು, ಸಾರ್ವಜನಿಕ ಶೌಚಾಲಯ ಎಲ್ಲಿ ಹುಡುಕುವು ಎಂಬ ಚಿಂತೆ ನಿಮಗೆ ಶುರುವಾಗುತ್ತದೆ. ಆದರೆ, ಈ ಚಿಂತೆಗೆ ಬ್ರೇಕ್ ಹಾಕಿ ನೀವಿರುವ ಸ್ಥಳದ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಎಲ್ಲಿದೆ ಎಂಬುದನ್ನು ತೋರಿಸಲು ಹೊಸದೊಂದು ಮೊಬೈಲ್ ಅಪ್ಲಿಕೇಷನ್ ಹುಟ್ಟಿಕೊಂಡಿದೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಸ್ವಚ್ಛ ಭಾರತ ಟಾಯ್ಲೆಟ್ ಲೊಕೇಟರ್ ಎಂಬ ನೂತನ ಅಪ್ಲಿಕೇಷನ್ ಸಿದ್ಧಪಡಿಸಿದ್ದು, ಬಿಬಿಎಂಪಿ ಅದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿನ ಶೌಚಾಲಯಗಳ ಪಟ್ಟಿಯನ್ನು ಅಪ್ಲಿಕೇಷನ್ಗೆ ಅಪ್ಲೋಡ್ ಮಾಡಲು ಮುಂದಾಗಿದೆ.
.jpg?fm=png&auto=format&w=800)
ಎಲ್ಲೆಂದರಲ್ಲಿ ಕಸ ಎಸೆಯುವುದು, ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಬೆಂಗಳೂರಿನ ಪರಿಸರ ಹಾಳಾಗಿ ಹೋಗಿದೆ. ಅದನ್ನು ನಿವಾರಣೆ ಮಾಡಲು ಬಿಬಿಎಂಪಿ ಅಧಿಕಾರಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ, ಬಯಲು ಮೂತ್ರ ವಿಸರ್ಜನೆ ತಡೆಯುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟಿರುವ ಬಿಬಿಎಂಪಿ ಅಧಿಕಾರಿಗಳು ಅದಕ್ಕಾಗಿ ಸ್ವಚ್ಛ ಭಾರತ ಟಾಯ್ಲೆಟ್ ಲೊಕೇಟರ್ ಎಂಬ ಹೊಸತೊಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ. ಅಪ್ಲಿಕೇಷನ್ ಮೂಲಕ ನೀವು ಬೆಂಗಳೂರಿನಲ್ಲಿ ಎಲ್ಲೇ ಇದ್ದರೂ, ನಿಮ್ಮ ಸಮೀಪದ ಸಾರ್ವಜನಿಕ ಶೌಚಾಲಯ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.
ನೂತನ ಅಪ್ಲಿಕೇಷನ್ ಕಾರ್ಯವೇನು?
ಯಾರಾದರೂ ಮೂತ್ರ ವಿಸರ್ಜನೆ ಮಾಡಬೇಕೆಂದರೆ ಶೌಚಾಲಯಗಳನ್ನು ಹುಡುಕಿಕೊಂಡು ಓಡಾಡಬೇಕಾಗುತ್ತದೆ. ಆದರೆ, ನೂತನ ಅಪ್ಲಿಕೇಷನ್ ಅನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇಸ್ಟೋರ್ನಿಂದ ಸ್ವಚ್ಛ ಭಾರತ ಟಾಯ್ಲೆಟ್ ಲೊಕೇಟರ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರೆ ನೀವು ಇರುವ ಸ್ಥಳದಿಂದ ಸುತ್ತಮುತ್ತ ಎಲ್ಲಿ ಸಾರ್ವಜನಿಕ ಶೌಚಾಲಯಗಳಿವೆ ಎಂಬುದನ್ನು ತಿಳಿಸಿಕೊಡುತ್ತದೆ. ಅದನ್ನು ನೋಡಿ ನೀವು ನೆಮ್ಮದಿಯಾಗಿ ನೇಚರ್ ಕಾಲ್ ಅಟೆಂಡ್ ಮಾಡಬಹುದು ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಶೀಘ್ರದಲ್ಲಿ ಸೇವೆಗೆ
ಈಗಾಗಲೆ ಸ್ವಚ್ಛ ಭಾರತ ಟಾಯ್ಲೆಟ್ ಲೊಕೇಟರ್ ಅಪ್ಲಿಕೇಷನ್ ಲಭ್ಯವಿದೆ. ಆದರೆ, ಬಿಬಿಎಂಪಿ ವಲಯ ಅಧಿಕಾರಿಗಳು ಶೌಚಾಲಯಗಳ ಮಾಹಿತಿಯನ್ನು ಅಪ್ಲಿಕೇಷನ್ಗೆ ಹಾಕದೇ ಇರುವ ಕಾರಣ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರು ಶೌಚಗೃಹಗಳ ಬಗ್ಗೆ ಯಾವುದೇ ಮಾಹಿತಿ ದೊರೆಯುವುದಿಲ್ಲ. ಶೀಘ್ರದಲ್ಲಿ ಈ ಕಾರ್ಯಪೂರ್ಣಗೊಳ್ಳಲಿದೆ. ಜಿಪಿಎಸ್ ಮೂಲಕ ಶೌಲಚಾಯದ ಚಿತ್ರದೊಂದಿಗೆ, ಅದು ಇರುವ ಸ್ಥಳವನ್ನು ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಸಾರ್ವಜನಿಕರು ನೂತನ ಅಪ್ಲಿಕೇಷನ್ ಮೂಲಕ ಶೌಚಾಲಯಗಳನ್ನು ಸರಾಗವಾಗಿ ಹುಡುಕಬಹುದಾಗಿದೆ
.jpg?fm=png&auto=format)
ಶೌಚಾಲಯದ ಸ್ಥಿತಿಯೂ ಲಭ್ಯ
ಶೌಚಗೃಹಗಳು ಎಲ್ಲಿವೆ ಎಂಬುದನ್ನು ತಿಳಿಸಿಕೊಡುವುದರೊಂದಿಗೆ ಆ ಶೌಚಾಲಯಗಳ ಸ್ಥಿತಿ ಹೇಗಿದೆ? ಅದರ ಬಳಿ ತೆರಳಲು ಯಾವ ಮಾರ್ಗದಲ್ಲಿ ಹೋಗಬೇಕು, ಉಚಿತವೋ ಅಥವಾ ಪಾವತಿ ಶೌಚಾಲಯವೋ ಎಂಬಿತ್ಯಾದಿ ಮಾಹಿತಿಗಳು ನಿಮಗೆ ಲಭ್ಯವಾಗಲಿದೆ. ಅಲ್ಲದೆ, ನೀವು ಶೌಚಾಲಯಗಳನ್ನು ಬಳಸಿದ ನಂತರ ಸ್ವಚ್ಛತೆ, ಮೂಲಭೂತ ಸೌಕರ್ಯ ಮತ್ತು ಸುರಕ್ಷತೆ ಆಧಾರದಲ್ಲಿ ಅಂಕಗಳನ್ನು ಮತ್ತು ಗುಣಮಟ್ಟ ಸುಧಾರಿಸಲು ಸಲಹೆಗಳನ್ನು ಅಪ್ಲಿಕೇಷನ್ ಮೂಲಕ ನೀಡಬಹುದು.
ಬೆಂಗಳೂರಿನಲ್ಲಿವೆ 587 ಸಾರ್ವಜನಿಕ ಶೌಚಾಲಯಗಳು
ಬಿಬಿಎಂಪಿ ಲೆಕ್ಕದಂತೆ ಬೆಂಗಳೂರಿನಲ್ಲಿ ಒಟ್ಟು 587 ಸಾರ್ವಜನಿಕ ಶೌಚಾಲಯಗಳಿವೆ. ಅವುಗಳಲ್ಲಿ ಬಹುತೇಕ ಶೌಚಗೃಹಗಳ ಸ್ಥಿತಿ ಹಾಳಾಗಿದ್ದು, ಅದನ್ನು ಸರಿಪಡಿಸುವ ಅಗತ್ಯವಿದೆ. ಸಾರ್ವಜನಿಕರು ಶೌಚಾಲಯ ಬಳಸಿದ ನಂತರ ಅದರ ಗುಣಮಟ್ಟ ಸುಧಾರಣೆಗೆ ನೀಡುವ ಸಲಹೆಯನ್ನಾಧರಿಸಿ, ಯಾವ್ಯಾವ ಶೌಚಾಲಯ ಅಭಿವೃದ್ಧಿ ಪಡಿಸಬೇಕು ಎಂಬುದು ಅಧಿಕಾರಿಗಳಿಗೆ ತಿಳಿದುಬರಲಿದೆ. ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದು ಅಧಿಕಾರಿಗಳು ಗುರಿ. ಅಲ್ಲದೆ, ಈಗಿರುವ 587ರೊಳಗೆ ಇನ್ನೂ 250 ಶೌಚಾಲಯ ನಿರ್ಮಾಣಕ್ಕೆ ಈಗಾಗಲೆ ನಿರ್ಧರಿಸಲಾಗಿದೆ. ಅದಕ್ಕೆ ಪ್ರಸ್ತಾವನೆ ಇದ್ದು, ಅದನ್ನು ಶೀಘ್ರದಲ್ಲಿ ಗುತ್ತಿಗೆ ಕರೆದು ಶೌಚಾಲಯ ನಿರ್ಮಿಸಲಾಗುತ್ತದೆ.