ರಸ್ತೆ ಬದಿಯ ಆಹಾರ ಮಾರಾಟಗಾರರಿಂದ ಉದ್ಯಮಶೀಲತೆಯ ಪಾಠಗಳು..!
ಟೀಮ್ ವೈ.ಎಸ್. ಕನ್ನಡ
ನನಗೆ ಬೆಂಗಳೂರನ್ನ ಸುತ್ತುವುದು ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ಸ್ಟ್ರೀಟ್ ಫುಡ್ ಹಾಗೂ ಸ್ಥಳೀಯ ತಿನಿಸುಗಳಿಗಾಗಿ ಆಗಾಗ ಹುಡುಕಾಡುತ್ತಿರುತ್ತೇನೆ. ಈ ವೇಳೆ ಅದೆಷ್ಟೋ ಅಂಗಡಿ ಮಾಲಿಕರ ಕ್ರಿಯಾಶೀಲತೆ, ಪಕ್ಕಾ ವ್ಯಾವಹಾರಿಕ ಬುದ್ಧಿ ಹಾಗೂ ವ್ಯಾಪಾರದಲ್ಲಿನ ಹೊಸತನಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಒಬ್ಬ ಟೀ ಅಂಗಡಿಯವನೂ ಕೂಡ ಗಮನ ಸೆಳೆಯುವಂತಹ ಉದ್ಯಮಶೀಲತೆಯನ್ನ ಪ್ರದರ್ಶಿಸುತ್ತಾನೆ. ಅದ್ರಲ್ಲಿ ಕೆಲವು ವ್ಯಾಪಾರ ವಹಿವಾಟಿಕೆಗೆ ಸ್ಫೂರ್ತಿ ತುಂಬ ಬಲ್ಲ ಕೆಲವು ಕುತೂಹಲಕಾರಿ ಉದಾಹರಣೆಗಳು ಇಲ್ಲಿವೆ.
1. ನೀವು ಏನು ಮಾಡಬೇಕು ಅನ್ನೋದನ್ನ ಜಗತ್ತು ನಿಮಗೆ ನಿರ್ದೇಶಿಸಲು ಬಿಡಬೇಡಿ
ಬೆಂಗಳೂರಿನ ಇಂದಿರಾನಗರದಲ್ಲಿರುವ ಶರೋನ್ ಟೀ ಸ್ಟಾಲ್ ನ ಮಾಲಿಕ ಡೇನಿಯಲ್ ಡಿಸೋಜಾ. ಹಲವು ಕನಸುಗಳೊಂದಿಗೆ ಟೀ ಅಂಗಡಿಯನ್ನ ಶುರುಮಾಡಿದ ಡೇನಿಯಲ್ ಗೆ ಎಲ್ಲಾ ಮಾಮೂಲಿ ಟೀ ಅಂಗಡಿಯಂತೆ ನಡೆಸೋದಕ್ಕೆ ಮನಸ್ಸಿರಲಿಲ್ಲ. ಇದಕ್ಕಾಗಿ ಹೊಸ ಐಡಿಯಾ ಮಾಡಿದ್ರು. ತನ್ನ ಮಾಮೂಲಿ ಟೀ ಅಂಗಡಿಯಲ್ಲೇ ವಿವಿಧ ವೆರೈಟಿ ಟೀಗಳನ್ನ ತಯಾರಿಸಲು ಶುರುಮಾಡಿದ್ರು. ಇದು ಸ್ಥಳೀಯರನ್ನ ಬಹಳವಾಗಿ ಆಕರ್ಷಿಸಿತು. ಅಲ್ಲಿಂದ ಶುರುವಾದ ಇವರ ಯಶಸ್ಸಿನ ಟೀ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಈ ಅಂಗಡಿಗೆ ಕೆಲವು ನಟರು ಹಾಗೂ ರಾಜಕಾರಣಿಗಳು ಆಗಾಗ್ಯೆ ಬಂದು ಹೋಗಿದ್ದಾರೆ. ಅಂತಹ ಸಂದರ್ಭಗಳ ಫೋಟೋಗಳನ್ನ ತೆಗೆದು ತನ್ನ ಅಂಗಡಿಯಲ್ಲಿ ತೂಗು ಹಾಕಿರುವ ಡೇನಿಯಲ್, ಗ್ರಾಹಕರನ್ನ ಸೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.

2. ಅನಿರೀಕ್ಷಿತವಾದುದನ್ನ ಸಾಧಿಸು. ಆಗ ಅಸಾಧ್ಯವಾಗಿದ್ದೂ ಕೈಗೆ ಬರುತ್ತೆ
ಸಣ್ಣ ಮಟ್ಟದ ಕ್ರಿಯಾಶೀಲತೆ ಉದ್ದಿಮೆಯ ಗತಿಯನ್ನೇ ಬದಲಾಯಿಸಿ ಬಿಡುತ್ತವೆ. ಸಣ್ಣಮಟ್ಟದಲ್ಲಿ ವ್ಯಾಪಾರವಾಗುತ್ತಿದ್ದ ವಸ್ತುಗಳು ದಿಢೀರನೆ ಗ್ರಾಹಕರನ್ನ ಸೆಳೆಯಲು ಶುರುಮಾಡುತ್ತವೆ. ಇದಕ್ಕೊಂದು ಉದಾಹರಣೆ ಒಬ್ಬಳು ಮೋದಕ ಮಾರಾಟಗಾರ್ತಿ. ಕೇವಲ ಬಿಳಿಯ ಬಣ್ಣದಲ್ಲಿ ತಯಾರಿಸಲ್ಪಡುತ್ತಿದ್ದ ಮೋದಕಗಳಿಗೆ ಕಲರ್ ಫುಲ್ ಟಚ್ ನೀಡಲು ಆಕೆ ನಿರ್ಧರಿಸಿದ್ಲು. ಇದಕ್ಕೆ ಆಕೆ ಬಳಸಿದ್ದು ನೈಸರ್ಗಿಕ ಬಣ್ಣಗಳನ್ನ. ಬೀಟ್ ರೂಟ್, ಕ್ಯಾರೆಟ್ ನಂತಹ ತರಕಾರಿಗಳನ್ನ ಬಳಸಿ ಮೋದಕಗಳನ್ನ ತಯಾರಿಸಿ ವ್ಯಾಪಾರ ಶುರು ಮಾಡಿದ್ಲು. ಕ್ರಿಯೇಟಿವ್ ಕಲರ್ ಫುಲ್ ಮೋದಕಗಳು ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

3. ಮನಸ್ಸಿದ್ದರೆ ಮಾರ್ಗ..!
ಒಬ್ಬ ಕಡಲೆ ಹಾಗೂ ಕ್ಯಾರೆಟ್ ಮಿಶ್ರಿತ ಉಸುಲಿ ಮಾರುವ ವ್ಯಾಪಾರಿಗೆ ತನ್ನ ತಿನಿಸುಗಳನ್ನ ಬೆಚ್ಚಗೆ ಶೇಖರಿಸಿ ಅದನ್ನ ಗ್ರಾಹಕರಿಗೆ ನೀಡಬೇಕು ಅಂತ ಯೋಚನೆ ಬಂತು. ಆದ್ರೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆತನಿಗೆ ತನ್ನ ಪದಾರ್ಥಗಳನ್ನ ಬಿಸಿಯಾಗಿ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಂತ ಅವನು ಸುಮ್ಮನೆ ಕೂರಲೂ ಇಲ್ಲ. ತನ್ನ ತಳ್ಳುಗಾಡಿಯ ಮೇಲೆ ಪುಟ್ಟದಾದ ಸ್ಟವ್ ಜೊತೆ ಸಣ್ಣ ತೂತುಗಳಿದ್ದ ಜಾಲರಿಯಂತಹ ಪ್ಲೇಟನ್ನೂ ಇಟ್ಟುಕೊಂಡ. ಇಂತಹ ವ್ಯವಸ್ಥೆ ಮಾಡಿಕೊಂಡ ಬಳಿಕ ಗ್ರಾಹಕರಿಗೆ ಬೆಚ್ಚಗಿನ ಉಸಲಿ ನೀಡುವುದು ಸುಲಭವಾಯ್ತು. ಹೆಚ್ ಎಸ್ ಆರ್ ಲೇ ಔಟ್ ನ 27ನೇ ಮೇನ್ ರೋಡ್ ನಲ್ಲಿರುವ ಕಬಾಬ್ ಸೆಂಟರ್ ನ ಮಾಲಿಕನೂ ಇದೆ ತಂತ್ರವನ್ನ ಅನುಸರಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಜೇಬು ತುಂಬಾಗಳಿಸಿದ್ದಾನೆ.

4. ನಿಯಮಿತ ಬಗೆಗಳು, ಮೀರಿಸಲಾಗದ ಗುಣಮಟ್ಟ
ಇತ್ತೀಚೆಗಷ್ಟೇ ನಾನು ಬೆಂಗಳೂರಿನ ಖ್ಯಾತ ಗಾಂಧಿಬಜಾರ್ ಗೆ ಹೋಗಿದ್ದಾಗ ಅಲ್ಲಿ ಪಕೋಡಾ, ಬಜ್ಜಿ ಮಾರುವ ಪ್ರವೀಣ್ ಎಂಬ ವ್ಯಕ್ತಿಯೊಬ್ಬನ ಪರಿಚಯವಾಯ್ತು. ಆತ ತುಂಬಾ ಸರಳವಾದ ಕ್ಯಾಪ್ಸಿಕಂ, ಬಾಳೆಕಾಯಿ, ಆಲೂಗಡ್ಡೆ ಹಾಗೂ ಮೆಣಸಿನ ಕಾಯಿ ಬಜ್ಜಿ ತಯಾರಿಸುತ್ತಿದ್ದ. ಆದ್ರೆ ಇತರೆಡೆ ಮಾರುತ್ತಿದ್ದ ಬಜ್ಜಿ ರೇಟ್ ಗೆ ಹೋಲಿಸಿದ್ರೆ ಶೇಕಡಾ 50ರಷ್ಟು ಕಡಿಮೆ ದರಕ್ಕೆ ವ್ಯಾಪಾರಿ ಪ್ರವೀಣ್ ಮಾರುತ್ತಿದ್ರು. ಆದ್ರೆ ಅದೆಲ್ಲಾ ಉತ್ಕೃಷ್ಟ ದರ್ಜೆಯ ತರಕಾರಿಗಳಿಂದ ತಯಾರಿಸಲ್ಪಟ್ಟವು ಅನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಇದು ಸ್ಥಳೀಯರನ್ನ ಹಾಗೂ ಗಾಂಧಿ ಬಜಾರ್ ಗೆ ಬರುವ ಇತರರನ್ನ ಆಕರ್ಷಿಸುತ್ತಿದೆ. ಟೇಸ್ಟ್ ನಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಪ್ರವೀಣ್ ಇವತ್ತೂ ಭರ್ಜರಿ ಆದಾಯಗಳಿಸುತ್ತಿದ್ದಾರೆ

5. ಸರ್ವೀಸ್ ನಲ್ಲಿ ಯಾವತ್ತಿಗೂ ನಗುವಿರಲಿ
ಕಿಕ್ಕಿರಿದು ತುಂಬಿರುವ ಜನ. ಅದ್ರ ನಡುವೆ ನಿಲ್ಲಿಸಲಾಗಿದ್ದ ವ್ಯಾನ್ ನಲ್ಲಿ ತಯಾರಿಸಲಾಗುತ್ತಿದ್ದ ಗೋಬಿ. ಪರಿಸ್ಥಿತಿಯನ್ನ ನೋಡಿದ್ರೆ ಅಲ್ಲಿ ಕಾಯುವಷ್ಟು ಯಾರಿಗೂ ತಾಳ್ಮೆ ಇರೋದಿಲ್ಲ. ಆದ್ರೆ ಗೋಬಿ ಮಂಚೂರಿ ವ್ಯಾಪ್ರಿ ರವಿ ಗ್ರಾಹಕರನ್ನ ಯಾವತ್ತಿಗೂ ಹಿಡಿದಿಟ್ಟುಕೊಂಡಿರುತ್ತಾರೆ. ಬನಶಂಕರಿಯ ಬಿಡಿಎ ಕಾಂಪ್ಲೆಂಕ್ಸ್ ಬಳಿ ಇರುವ ಈ ಗೋಬಿ ಗಾಡಿ ಅಲ್ಲಿನವರಿಗೆ ತುಂಬಾ ಅಚ್ಚುಮೆಚ್ಚು. ಯಾಕಂದ್ರೆ ಅಂಗಡಿ ಮಾಲಿಕ ರವಿ ನಗುಮೋಗದಿಂದ ಎಲ್ಲರನ್ನ ಸಮಾಧಾನ ಪಡಿಸುತ್ತಾರೆ. ಅಲ್ಲದೆ ತಮ್ಮ ಇತರೆ ಚೈನೀಸ್ ಫುಡ್ ವೆರೈಟಿಗಳಲ್ಲಿ ಯಾವತ್ತೂ ಕ್ವಾಲಿಟಿಯೊಂದಿಗೆ ರಾಜಿಮಾಡಿಕೊಂಡಿದ್ದೇ ಇಲ್ಲ.
6. ಅಸ್ಥಿತ್ವದಲ್ಲಿರುವ ಕಲ್ಪನೆಗಳಲ್ಲೇ ಭಿನ್ನತೆ ಇರಲಿ..
ಪಿಜ್ಜಾಗಳನ್ನ ನಿರ್ದಿಷ್ಟ ಫ್ಯಾನ್ಸಿ ಚೈನೀಸ್ ಸ್ಟಾಲ್ ಗಳಲ್ಲೇ ತಿನ್ನಬೇಕು ಹಾಗೂ ಸೂಪ್ ಗಳನ್ನ ರೆಸ್ಟೋರೆಂಟ್ ಗಳಲ್ಲೇ ಕುಡಿಯಬೇಕು ಅಂತ ತುಂಬಾ ಜನ ಅಂದುಕೊಂಡಿದ್ದಾರೆ. ಆದ್ರೆ ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನ ವಲ್ಲಾರ್ ಮತಿ ಕಾಂಡಿಮೆಂಟ್ಸ್ ಗೆ ಬಂದ್ರೆ ನಿಮ್ಮ ನಿರ್ಧಾರ ಬದಲಾಗುತ್ತದೆ. ಇಲ್ಲಿ ಪ್ರತೀ ದಿನವೂ ವಿವಿಧ ರೀತಿಯ ಸೂಪ್ ಗಳನ್ನ ತಯಾರಿಸಿ ಮಾರಲಾಗುತ್ತಿದೆ. ಅಲ್ಲದೆ ಇಲ್ಲಿ ಸ್ವಾದಷ್ಟವಾದ ಪಿಜ್ಜಾಗಳನ್ನೂ ತಯಾರಿಸಲಾಗುತ್ತಿದ್ದು, ಇದಕ್ಕಾಗಿ ಪ್ರತೀ ದಿನವೂ ಜನರು ಮುಗಿಬೀಳುವುದು ಸಾಮಾನ್ಯವಾಗಿದೆ.

6. ಏನು ಮಾಡಬೇಕೋ ಅದರಲ್ಲಿ ಎಕ್ಸ್ ಪರ್ಟ್ ಗಳಾಗಿ
ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆಗಳಿಗೆ ಹೆದರಿ ಅದೆಷ್ಟೋ ಮಂದಿ ಸ್ಟ್ರೀಟ್ ಫುಡ್ ಗಳನ್ನ ತಿನ್ನಲು ಮನಸ್ಸು ಮಾಡುವುದಿಲ್ಲ. ಇದನ್ನ ಮನಗಂಡ ರೇವತಿ ಎಂಬುವವರು ಮಲ್ಲೇಶ್ವರಂನಲ್ಲಿ ವಿಶೇಷ ಫುಡ್ ಐಟಂಗಳನ್ನ ಮಾರುವ ಅಂಗಡಿ ಶುರುಮಾಡಿದ್ದಾರೆ. ಇಲ್ಲಿ ಹಾಗಲಕಾಯಿ, ಮೊಳಕೆ ಕಾಳು ಹಾಗೂ ಇತರೆ ಆರೋಗ್ಯ ಪೂರ್ಣ ವಸ್ತುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನ ಮಾರಿ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ.
8. ಗ್ರಾಹಕರು ಇಷ್ಟಪಡುವುದನ್ನೇ ನೀಡಿ ಸಂತೋಷ ಪಡಿ
ಇದು ಗ್ರಾಹಕರು ಹಾಗೂ ವ್ಯಾಪಾರದ ನಡುವೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಗಮನ ವಹಿಸಲೇ ಬೇಕಾದ ಅಂಶ. ಗೋವಾದ ಪ್ರತೀ ಸ್ಟೋರ್ ಗಳಲ್ಲೂ ಗ್ರಾಹಕರು ಹೆಚ್ಚು ಏನನ್ನು ಬಯಸುತ್ತಾರೋ ಅಂತಹ ವಸ್ತುಗಳಿಗೇ ಆದ್ಯತೆ ನೀಡಲಾಗಿದ್ದು ಅಲ್ಲಿ ಸ್ಟ್ರೀಟ್ ಫುಡ್ ಗಳ ವ್ಯಾಪಾರಿಗಳು ಯಾವತ್ತೂ ನಷ್ಟ ಅನುಭವಿಸಿದ್ದೇ ಇಲ್ಲ. ಹೀಗಾಗಿ ಸ್ಥಳೀಯ ಗ್ರಾಹಕರ ಮನಸ್ಥಿತಿಯನ್ನ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೆಜ್ಜೆಯನ್ನಿಟ್ಟರೆ ಲಾಭದ ಲೆಕ್ಕಾಚಾರ ಮಾಡಬಹುದು.