ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!
ಚೈತ್ರಾ ಎನ್

ಹೇಳಿ ಕೇಳಿ ಇದು ಇಂಡಿಪೆಂಡೆಂಟ್ ಕಾಲ. ಬಾಸಿಸಮ್ಗಳಿಂದ ಬೇಸತ್ತ ಮನಗಳು ಇಂದು ಸ್ಟಾರ್ಟ್ಅಪ್ಗಳಿಗೆ ಮೊರೆ ಹೋಗುತ್ತಿರೋದು ರೆವಲ್ಯೂಷನರಿ ಬೆಳವಣಿಗೆ. ಆದರೆ ಎಲ್ಲದ್ದಕ್ಕೂ ಇವತ್ತು ಇನ್ವೆಸ್ಟ್ಮೆಂಟ್ ಅತ್ಯಗತ್ಯ. ಹಾಗಾಂತ ಕೈ ಕೈ ಹಿಚುಕಿ ಕುಳಿತುಕೊಂಡರೆ ಹೇಗೆ? ಇಲ್ಲಿ ನೋಡಿ 20 ವರ್ಷಗಳ ಕೆಳಗೆ ತಮಗೆ ತಿಳಿದ ಹೂದಾನಿ ಕಲೆಯ ಉದ್ಯಮದಿಂದ ಇಂದಿನ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಲ್ಯಾಂಡ್ಸ್ಕೇಪಿಂಗ್ ಮಾಡುವ ತನಕ ಲ್ಯಾಂಡ್ ಸ್ಕೇಪಿಂಗ್ ಉದ್ಯಮದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ರೇವತಿ ಕಾಮತ್ರವರ ಕಥೆ ಕೇಳಿದ್ರೆ ಮೈ ರೋಮಾಂಚನವಾಗುತ್ತೆ. ಬಂದದ್ದು ಬರಲಿ ಆತ್ಮವಿಶ್ವಾಸದ ದಯೆ ಇರಲಿ ಎನ್ನುತ್ತಾ ಮುನ್ನುಗ್ಗಿಬಿಡುವಂತೆ ಮಾಡುತ್ತದೆ. ಪ್ರತಿಭೆಯನ್ನೇ ಬಂಡವಾಳವಾಗಿರಿಸಿಕೊಂಡು ರೇವತಿಯವರು ಬೆಳೆದ ಪರಿಯೇ ಸ್ಪೂರ್ತಿದಾಯಕ.

ಹೂವ ಹಾದಿಯಲ್ಲಿ
ಬಾಲ್ಯದಿಂದಲೂ ಬಹಳ ಚಟುವಟಿಕೆಯಿಂದ ಇದ್ದ ರೇವತಿ ಕಾಮತ್ರವರ ತಂದೆ ಸಂಗೀತ ವಿದ್ವಾಂಸಕರು. ಶೃಂಗೇರಿಯಲ್ಲಿ ಪ್ರಾಂಶುಪಾಲರಾಗಿದ್ದರು. ತಂದೆಯವರ ಪ್ರೇರಣೆಯಿಂದಲೇ ರೇವತಿ 5 ವರ್ಷಕ್ಕೆ ವೀಣೆ ನುಡಿಸುವುದನ್ನು ಕಲಿತರು. ವೀಣೆ ಅಭ್ಯಾಸದೊಂದಿಗೆ ಸಸ್ಯಶಾಸ್ತ್ರದಲ್ಲೂ ಪದವಿ ಪಡೆದರು. 21 ವರ್ಷ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಅಷ್ಟರಲ್ಲೇ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದರು. ಮದುವೆಯ ನಂತರವು ಮನೆಯಲ್ಲಿ ಫ್ಲವರ್ ಅರೆಂಜ್ಮೆಂಟ್ ಪ್ರಾರಂಭಿಸಿದರು. ಜೊತೆಯಲ್ಲಿಯೇ ಸೀರೆಯ ಬ್ಯುಸಿನೆಸ್ ಕೂಡ ಕೈ ಹಿಡಿಯಿತು. ವ್ಯಾಪಾರದಲ್ಲಿ ಬಂದ ಲಾಭವನ್ನು ಜೋಪಾನವಾಗಿ ಬ್ಯಾಂಕಿನಲ್ಲಿಡುತ್ತಿದ್ದರು. ಪ್ರಿಯಾರಾಜನ್ರವರಿಂದ ಇಕೆಬಾನ ಫ್ಲವರ್ ಅರೆಂಜ್ಮೆಂಟ್ ಕಲಿಯುತ್ತಿದ್ದರು. ಹೀಗಿರುವಾಗ ಒಮ್ಮೆ ರೇವತಿಯವರ ಮನೆಗೆ ಸ್ನೇಹಿತರೊಬ್ಬರು ಬಂದರು. ಫ್ಲವರ್ ಅರೆಂಜ್ಮೆಂಟ್ಸ್ನ್ನು ಸೂಕ್ಷ್ಮವಾಗಿ ಗಮನಿಸಿದ ಅವರು " ನೀವು ಇದನ್ನು ಪ್ರೊಫೆಷನ್ ಆಗಿ ತೆಗೆದುಕೊಳ್ಳಬಾರದೇಕೆ"? ಎಂದಿದ್ದೆ ತಡ ರೇವತಿಯವರ ಮನದಲ್ಲಿ ಭರವಸೆ ಮೂಡಲಾರಂಭಿಸಿತು. ಅಲ್ಲಿಯ ತನಕ ಮದುವೆ ಮನೆ, ಫಂಕ್ಷನ್ಗಳಿಗೆ, ಅಕ್ಕ ಪಕ್ಕದ ಮನೆಗಷ್ಟೇ ಹೂದಾನಿ ರೆಡಿ ಮಾಡುತ್ತಿದ್ದ ರೇವತಿಯವರು ಒಂದು ನಿರ್ಧಾರಕ್ಕೆ ಬಂದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ಆ ನಿರ್ಧಾರವೇ ಟರ್ನಿಂಗ್ ಪಾಯಿಂಟ್..!
ಸ್ನೇಹಿತರ ಮಾತಿನಂತೆ ತಮ್ಮ ಬಳಿ ಇದ್ದ ಸಣ್ಣ ಮಟ್ಟದ ಹಣದಲ್ಲೇ 40 ಬೊಕ್ಕೆಗಳನ್ನು ತಯಾರಿಸಿ ವಿಪ್ರೋ ಕಂಪನಿಗೆ ಅಪ್ರೋಚ್ ಮಾಡಿದರು. ರೇವತಿಯವರ ಉತ್ಸಾಹ ಮತ್ತು ಹೂದಾನಿಯ ಕಲೆಗೆ ಮನಸೋತ ವಿಪ್ರೋ ಕಂಪನಿಯಿಂದ 360 ಆರ್ಡರ್ಗಳು ದೊರೆತವು. ಇದಾದ ನಂತರ ಬಂದ ಹಣವನ್ನು ಬಂಡವಾಳವನ್ನಾಗಿಸಿಕೊಂಡರು. ಅಲ್ಲಿಂದ ಹೋಟೆಲ್ಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ ಆರ್ಡರ್ಸ್ ಹಿಡಿಯುತ್ತಿದ್ದರು. ಅದೇ ಸಮಯ ಹೂದಾನಿಯ ಅಂಗಡಿ ತೆರೆಯಲು ಯೋಚಿಸಿದರು. ಆದರೆ ಸಾಕಷ್ಟು ಹಣವಿರದ ಕಾರಣ ಜೈನಗರದ ದಾಸ್ ಕಮರ್ಷಿಯಲ್ನ ಕಾಂಪೌಂಡ್ ಒಳಗೆ ಸಣ್ಣದಾಗಿ ಶಾಪ್ ತೆರೆದರು. ಇದರೊಟ್ಟಿಗೆ ಮ್ಯೂಸಿಕ್ ಇವೆಂಟ್, ಮದುವೆ ಆರ್ಡರ್ಸ್, ಹೋಟೆಲ್, ರೆಸಾರ್ಟ್, ಸಾಫ್ಟ್ವೇರ್ ಕಂಪನಿಗಳಿಗೆ ಕೆಲಸ ಮಾಡಿಕೊಟ್ಟರು. ಸುಮಾರು ಒಂದೂವರೆ ವರ್ಷದಲ್ಲಿ ಫ್ಲವರ್ ಶಾಪ್ ಒಂದು ಹಂತಕ್ಕೆ ಯಶಸ್ವಿಯಾಗಿತ್ತು. ಆಗ ಅದೇ ದಾಸ್ ಕಮರ್ಷಿಯಲ್ನಲ್ಲಿ 2 ಲಕ್ಷ ರೂಪಾಯಿ ನೀಡಿ ಕೆಳ ಅಂತಸ್ತಿನಲ್ಲಿ ಒಂದು ಶಾಪ್ ಬಾಡಿಗೆಗೆ ಪಡೆದರು. ಎಲ್ಲಾ ಕಡೆಗೂ ತಾವೇ ಆರ್ಡರ್ಸ್ ಪಡೆದು ಕಳುಹಿಸುತ್ತಿದ್ದರು. ಕೆಲವೊಮ್ಮೆ ಬರಿಗೈಯಲ್ಲೂ ಹಿಂದಿರುಗಿದ್ದಾರೆ. ಆದರೆ ಪ್ರಯತ್ನವನ್ನಂತೂ ಬಿಡಲೇ ಇಲ್ಲ. ಜಸ್ಟ್ ಡಯಲ್ನಲ್ಲಿ ರಿಜಿಸ್ಟರ್ ಮಾಡಿದ ಮೇಲೆ ಹೇಗೋ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿತು.

ಲ್ಯಾಂಡ್ಸ್ಕೇಪಿಂಗ್ನ ಲ್ಯಾಂಡ್ ಮಾರ್ಕ್
ಒಮ್ಮೆ ಮೈಕೋ ಕಂಪನಿಗೆ ಒಂದು ಇವೆಂಟ್ ಮಾಡಿದರು. ಇದರಿಂದ ಇಂಪ್ರೆಸ್ ಆದ ಮೈಕೋ ಕಂಪನಿ ರೇವತಿಯವರಿಗೆ ಅದೃಷ್ಟದ ಬಾಗಿಲನ್ನೇ ತೆರೆಯಿತು. ಮೈಕೋ ಕಂಪನಿಯ ಮುಖ್ಯಸ್ಥರಾದ ಆಲ್ಬರ್ಟ್ರವರ ಮನೆಗೆ ಲ್ಯಾಂಡ್ಸ್ಕೇಪಿಂಗ್ ಮಾಡುವಂತೆ ಕೇಳಿದರು. ಆದರೆ ರೇವತಿಯವರಿಗೆ ಲ್ಯಾಂಡ್ಸ್ಕೇಪಿಂಗ್ ಪದವೇ ಹೊಸದಾಗಿತ್ತು. "ತನ್ನಿಂದ ಸಾಧ್ಯವಿಲ್ಲ"ವೆಂದು ರೇವತಿಯವರು ಕೈ ಚೆಲ್ಲಿ ಕುಳಿತರು. ಒಂದು ವಾರದೊಳಗೆ ವಿವಿಧ ಲೈಬ್ರರಿ, ಬುಕ್ ಶಾಪ್ಗಳಿಗೆ ಭೇಟಿ ನೀಡಿ, ಅಲ್ಲಿಂದಲೇ ಲ್ಯಾಂಡ್ ಸ್ಕೇಪಿಂಗ್ ಬಗ್ಗೆ ತಿಳಿದುಕೊಂಡರು. ಒಂದೊಂದು ಪುಸ್ತಕದ ಬೆಲೆ 4000 ಗಳಿದ್ದಾಗ ಬುಕ್ ಶಾಪ್ನವರೇ ರೇವತಿಯವರಿಗೆ ಅಲ್ಲಿಯೇ ಓದುವುದಕ್ಕೆ ಅವಕಾಶ ಮಾಡಿಕೊಟ್ಟರು. ಒಂದು ವಾರದ ನಂತರ ರೇವತಿಯವರು ಲ್ಯಾಂಡ್ ಸ್ಕೇಪಿಂಗ್ ಆರಂಭಿಸಿದರು. ಅದರಲ್ಲಿ ಯಶಸ್ವಿಯೂ ಆದರು. ನಂತರ ಮುಟ್ಟಿದ್ದೆಲ್ಲಾ ಚಿನ್ನ!

ಆಫರ್ಸ್ ಮೇಲೆ ಆಫರ್ಸ್
ಇಲ್ಲಿಂದ ರೇವತಿಯವರಿಗೆ ಅವಕಾಶಗಳ ಸುರಿಮಳೆ ಸುರಿಯತೊಡಗಿತು. ಕುವೆಂಪು ಯೂನಿವರ್ಸಿಟಿಯ ಕುವೆಂಪುವನ, ಮೈಸೂರು ವಿಶ್ವವಿದ್ಯಾಲಯದ, ಲ್ಯಾಂಡ್ಸ್ಕೇಪಿಂಗ್ ಸಾಕಷ್ಟು ಹೆಸರು ತಂದುಕೊಟ್ಟವು. ಕಂಟ್ರಿ ಕ್ಲಬ್, ಗಾರ್ಡನ್, ಮಹಾವೀರ್ ಕನ್ಸ್ಟ್ರಕ್ಷನ್, ಚಿನ್ನಸ್ವಾಮಿ ಸ್ಟೇಡಿಯಂ, ಎಲಿಟಾ ಪ್ರಾಮಿನೇಡ್ ಸೇರಿದಂತೆ ಹಲವಾರು ದೊಡ್ಡದೊಡ್ಡ ಸಂಸ್ಥೆಗಳಿಗೆ ಲ್ಯಾಂಡ್ಸ್ಕೇಪಿಂಗ್ ಮಾಡಿದ್ದಾರೆ. ಸದ್ಯ ಫಾರೆಸ್ಟೇಷನ್ನಲ್ಲಿ ತೊಡಗಿಸಿಕೊಂಡಿರುವ ರೇವತಿಯವರು ಕೈಗಾರಿಕಾ ಪ್ರದೇಶದಲ್ಲಿ 5 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮಂತ್ರಿ ಡೆವೆಲಪರ್ಸ್ರಿಂದ ಹೊಸ ಪ್ರಾಜೆಕ್ಟ್ ಸಿಕ್ಕಿದೆ. ಅಲ್ಲದೇ ಒರಿಸ್ಸಾದಲ್ಲಿ ಟಾಟಾ ಸ್ಟೀಲ್ನ 500 ಎಕರೆ ಜಾಗವನ್ನು ಲ್ಯಾಂಡ್ ಸ್ಕೇಪ್ ಮೂಲಕ ಚೆಂದಗಾಣಿಸುವ ಆಫರ್ಸ್ ಕೂಡ ಬಂದಿದೆ.

ತಮ್ಮ ಯಶಸ್ಸಿಗೆ ಮನಿ ಮ್ಯಾನೇಜ್ಮೆಂಟ್ ಕೂಡ ಕಾರಣವೆನ್ನುತ್ತಾರೆ. ಬಂದ ಹಣವನ್ನು ಅನವಶ್ಯಕವಾಗಿ ಖರ್ಚು ಮಾಡದೇ ಎಲ್ಲವನ್ನು ಬ್ಯಾಂಕ್ನಲ್ಲಿ ಉಳಿಸಿದರು. ಆಟೋದಿಂದ ಆರಂಭಿಸಿದ ವ್ಯವಹಾರ ಇಂದು ಭರ್ಜರಿ ಕಾರು, ಬಂಗಲೆ, ಸಮಾಜದಲ್ಲಿ ಸ್ಥಾನ-ಮಾನ ತಂದುಕೊಟ್ಟಿದೆ. ಖರ್ಚಿನ ಬಗ್ಗೆ ಹೆಚ್ಚಿನ ನಿಗಾ ವಹಿಸುವ ರೇವತಿಯವರು ತಮ್ಮ ಬಳಿ ಎಟಿಎಮ್, ಕ್ರೆಡಿಟ್ ಕಾರ್ಡ್ ಯಾವುದನ್ನು ಇರಿಸಿಕೊಂಡಿಲ್ಲ. ಇಂದಿಗೂ ತಮ್ಮೆಲ್ಲಾ ವ್ಯವಹಾರವನ್ನು ಬ್ಯಾಂಕ್ ಮೂಲಕವೇ ನಡೆಸುತ್ತಾರೆ. ಇದನ್ನು ಪ್ರತಿಯೊಬ್ಬರು ಕಲಿಯಲೇಬೇಕು ಎನ್ನುತಾರೆ.
ಇದನ್ನು ಓದಿ: ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..
ಲಾಸ್ಟ್ ಫ್ಲವರ್
ಲ್ಯಾಂಡ್ಸ್ಕೇಪಿಂಗ್ ಒಂದು ಒಳ್ಳೆಯ ಕೆಲಸ. ಇದು ಲಾಭದಾಯಕ ಉದ್ಯಮ. ಇಲ್ಲಿ ಕಳೆದುಕೊಳ್ಳವುದು ಏನೂ ಇಲ್ಲ. ಕಡಿಮೆ ಬಂಡವಾಳ ಹೆಚ್ಚು ಲಾಭ, ಆದರೆ ವ್ಯವಹರಿಸುವಾಗ ಹಣ, ದಾಖಲಾತಿಗಳ ಬಗ್ಗೆ ಗಮನವಿರಿಸಬೇಕು ಎನ್ನುತ್ತಾರೆ." ಪ್ರಯತ್ನಿಸದ ಹೊರತು ಯಾವ ಅವಕಾಶಗಳು ಸುಮ್ಮನೇ ಬರುವುದಿಲ್ಲ. ಯಾರ ಬೆನ್ನೆಲುಬು ಇಲ್ಲದೇ ಸ್ವಂತ ಪರಿಶ್ರಮ, ಛಲ, ಯೋಚಿಸುವ ಮನೋಭಾವ, ಪ್ಲಾನಿಂಗ್ ಇದ್ದರೇ ಯಾವುದಕ್ಕೂ ಹೆದರಬೇಕಿಲ್ಲ ಎನ್ನುವು ರೇವತಿಯವರ ಸಕ್ಸಸ್ ಮಂತ್ರ.
1. ಅವಿವಾಹಿತರಿಗೆ ಇನ್ನು ಮುಂದೆ ಯಾರ ಕಾಟವೂ ಇಲ್ಲ..!
2. ಒಂದೇ ಕ್ಲಿಕ್ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!
3. ನಿಮ್ಮ ಜೀವನದ ಕಠಿಣ ಸಮಸ್ಯೆಗೆ AdviceAdda.com ನಲ್ಲಿ ಸಿಗುತ್ತೆ ತಜ್ಞರಿಂದ ಪರಿಹಾರ